ಬೈಂದೂರು: ರಾಜ್ಯ ಸರ್ಕಾರ ಮಂಡಿಸಿರುವ 17ನೇ ರಾಜ್ಯ ಬಜೆಟ್ ಕರಾವಳಿ ಭಾಗದ ಜನರಲ್ಲಿ ಭಾರೀ ನಿರಾಸೆ ಹಾಗೂ ಆಕ್ರೋಶವನ್ನು ಉಂಟುಮಾಡಿದೆ ಎಂದು ಬೈಂದೂರು ಬಿಜೆಪಿ ಯುವ ಮೋರ್ಚಾ ಮುಖಂಡ ಗಜೇಂದ್ರ ಎಸ್. ಬೇಲೆಮನೆ ಹೇಳಿದ್ದಾರೆ.
ಕರ್ನಾಟಕದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗವನ್ನು ಬಜೆಟ್‌ನಲ್ಲಿ ಮತ್ತೆ ನಿರ್ಲಕ್ಷ್ಯ ಮಾಡಲಾಗಿದೆ. ಶಿಕ್ಷಣ, ಬ್ಯಾಂಕಿಂಗ್, ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಕರಾವಳಿ ಭಾಗ ರಾಜ್ಯದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದರೂ ಬಜೆಟ್ ಹಂಚಿಕೆಯಲ್ಲಿ ಈ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದಿದ್ದಾರೆ.
ಮೀನುಗಾರರ ಜೀವನ ಸುಧಾರಣೆ, ಕಡಲ್ಕೊರೆತ ತಡೆ ಯೋಜನೆಗಳು, ಕರಾವಳಿ ರಕ್ಷಣಾ ಕಾಮಗಾರಿಗಳು, ಪ್ರವಾಸೋದ್ಯಮ ಅಭಿವೃದ್ಧಿ, ಬಂದರುಗಳ ವಿಸ್ತರಣೆ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಈ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟ ಯೋಜನೆಗಳಿಲ್ಲ. ಇದು ಕರಾವಳಿ ಭಾಗದ ಜನರ ಆಶಾಭಾವನೆಗಳಿಗೆ ದೊಡ್ಡ ಹೊಡೆತವಾಗಿದೆ ಎಂದು ಹೇಳಿದ್ದಾರೆ.
ಕರಾವಳಿ ಭಾಗದ ಜನರ ಮತ ಬೇಕಾದಾಗ ಮಾತ್ರ ರಾಜಕೀಯ ಪಕ್ಷಗಳಿಗೆ ನಾವು ನೆನಪಾಗುತ್ತೇವೆ. ಆದರೆ ಬಜೆಟ್ ಹಂಚುವಾಗ ಕರಾವಳಿ ಅಭಿವೃದ್ಧಿಯನ್ನು ಮರೆತುಬಿಡುತ್ತಾರೆ. ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗೆ ಯಾವುದೇ ಸ್ಪಷ್ಟ ಘೋಷಣೆಗಳಿಲ್ಲ. ಇದನ್ನು ಕರಾವಳಿ ಭಾಗದ ಜನರೊಂದಿಗೆ ಮಾಡಿದ ಅನ್ಯಾಯ ಎಂದು ಹೇಳಬಹುದು ಎಂದು ಗಜೇಂದ್ರ ಎಸ್. ಬೇಲೆಮನೆ ಹೇಳಿದ್ದಾರೆ.
ಇದಲ್ಲದೆ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ಹಲವು ಯೋಜನೆಗಳಿಗೆ ದೊಡ್ಡ ಮೊತ್ತದ ಅನುದಾನ ಘೋಷಿಸಲಾಗಿದೆ. ಒಂದು ಭಾಗದ ಜನರನ್ನು ತೃಪ್ತಿ ಪಡಿಸಲು ಮತ್ತೊಂದು ಭಾಗದ ಜನರನ್ನು ಕಡೆಗಣಿಸುವುದು ಯಾವ ರೀತಿಯ ಸಮಾನತೆಯ ಆಡಳಿತ ಎಂಬ ಪ್ರಶ್ನೆ ಮೂಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಬೈಂದೂರು ಬಿಜೆಪಿ ಯುವ ಮೋರ್ಚಾ ಈ ಬಜೆಟ್ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕರಾವಳಿ ಭಾಗದ ಅಭಿವೃದ್ಧಿಯನ್ನು ಕಡೆಗಣಿಸುವ ಯಾವುದೇ ನೀತಿಯನ್ನು ಜನರು ಸಹಿಸುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ : ಸಾಲ ಮಾಡದೇ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ – ಸಿಎಂ ಸಿದ್ದರಾಮಯ್ಯ



















