ಬೆಂಗಳೂರು : ಸಿಲಿಕಾನ್ ಸಿಟಿಯ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಅತ್ಯಂತ ರೋಚಕ ರಕ್ಷಣಾ ಕಾರ್ಯಾಚರಣೆಯೊಂದು ನಡೆದಿದೆ. ಹೌದು.. ವಾಕಿಂಗ್ ಹೋಗಿದ್ದ ವೇಳೆ 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 56 ವರ್ಷದ ಮಹಿಳೆಯನ್ನು ಬೆಂಗಳೂರಿನ ಚಂದ್ರಲೇಔಟ್ ಪೊಲೀಸರು ರೋಚಕ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
56 ವರ್ಷದ ಮಹಿಳೆಯೊಬ್ಬರು ಇಂದು (ಮಾರ್ಚ್ 06) ವಾಕಿಂಗ್ ಹೋಗುವಾಗ ನಾಗರಭಾವಿ ಪಾರ್ಕ್ ಸಮೀಪದ ಸುಮಾರು 25 ಅಡಿ ಆಳದ ಗುಂಡಿಗೆ ಆಕಸ್ಮಿಕವಾಗಿ ಬಿದ್ದು ಮೇಲೆ ಬರಲಾಗದೇ ಒಳಗೆ ಅಪಾಯಕ್ಕೆ ಸಿಲುಕಿದ್ದರು. ಗುಂಡಿ ತೀವ್ರ ಆಳವಾಗಿದ್ದರಿಂದ ಹೊರಬರಲು ಸಾಧ್ಯವಾಗದೆ ಸುಧಾ ಅವರು ಅಲ್ಲಿಯೇ ಸುಮಾರು ಹೊತ್ತು ಪರದಾಡಿದ್ದಾರೆ. ಬೆಳಗಿನ ಜಾವವಾಗಿದ್ದರಿಂದ ಅಲ್ಲಿ ಜನಸಂಚಾರವೂ ವಿರಳವಾಗಿತ್ತು. ಗುಂಡಿಯೊಳಗೆ ಬಿದ್ದ ಆಘಾತದಿಂದ ಸುಧಾ ಅವರು ಅಲ್ಲೇ ಅಸ್ವಸ್ಥರಾಗಿದ್ದರು.
ಮಗ ತಾಯಿ ಮನೆಗೆ ಬರದಿರುವುದರಿಂದ ಆತಂಕಗೊಂಡು 112ಗೆ ಕರೆ ಮಾಡಿ ತಿಳಿಸಿದ್ದ. ಈ ಕರೆ ಬಳಿಕ ಅಲರ್ಟ್ ಆದ ಚಂದ್ರಲೇಔಟ್ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಹಿಳೆಯ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದ್ದಾರೆ. ಆಗ ಮಹಿಳೆಯ ಮೊಬೈಲ್ ಸಿಗ್ನಲ್ ನಾಗರಭಾವಿ ಪಾರ್ಕ್ ಬಳಿ ತೋರಿಸಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಪಾರ್ಕ್ ಬಳಿ ಅಗೆಯಲಾಗಿದ್ದ ಆಳವಾದ ಗುಂಡಿಯೊಳಗೆ ಮಹಿಳೆ ಅಸ್ವಸ್ಥರಾಗಿ ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ಪೊಲೀಸರು, ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದ ಹರಸಾಹಸ ಪಟ್ಟು 25 ಅಡಿ ಆಳದ ಗುಂಡಿಯಿಂದ ಸುಧಾ ಅವರನ್ನು ಮೇಲೆತ್ತಿದ್ದಾರೆ. ಬಳಿಕ ಸ್ವಸ್ಥರಾಗಿದ್ದ ಸುಧಾ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರ ಕಾರ್ಯಚರಣೆ ಕುಟುಂಬದವರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ – 200ಕ್ಕೂ ಹೆಚ್ಚು ಅಕ್ರಮ ವಲಸಿಗರು FRRO ವಶಕ್ಕೆ!



















