ಕೊಲೊಂಬೊ/ಕರಾಚಿ : ಟಿ20 ವಿಶ್ವಕಪ್ 2026ರಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈಗ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಶ್ರೀಲಂಕಾದಲ್ಲಿ ನಡೆದ ಟೂರ್ನಿಯ ವೇಳೆ ಪಾಕಿಸ್ತಾನ ತಂಡದ ಆಟಗಾರನೊಬ್ಬ ಹೋಟೆಲ್‌ನ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಆ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಉಂಟುಮಾಡಿದೆ.
ವರದಿಗಳ ಪ್ರಕಾರ, ಶ್ರೀಲಂಕಾದ ಕಂಡಿಯಲ್ಲಿ ನಡೆದ ಸೂಪರ್ 8 ಪಂದ್ಯಕ್ಕೂ ಮುನ್ನ ಈ ಘಟನೆ ಸಂಭವಿಸಿದೆ. ಪಾಕಿಸ್ತಾನ ತಂಡವು ವಾಸ್ತವ್ಯ ಹೂಡಿದ್ದ ‘ಗೋಲ್ಡನ್ ಕ್ರೌನ್ ಹೋಟೆಲ್’ನಲ್ಲಿ ತಂಡದ ಸದಸ್ಯನೊಬ್ಬ ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿಯೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆಯು ಕಿರುಚಾಡಿ ಸಹಾಯಕ್ಕಾಗಿ ಯಾಚಿಸಿದಾಗ, ಹೋಟೆಲ್‌ನ ಇತರ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿದ್ದಾರೆ.
ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಮ್ಯಾನೇಜರ್?
ಘಟನೆ ತಿಳಿಯುತ್ತಿದ್ದಂತೆಯೇ ಹೋಟೆಲ್ ಆಡಳಿತ ಮಂಡಳಿಯು ಪಾಕಿಸ್ತಾನ ತಂಡದ ಮ್ಯಾನೇಜರ್ ನವೀದ್ ಚೀಮಾ ಅವರಿಗೆ ದೂರು ನೀಡಿದೆ. ಹೋಟೆಲ್ ಸಿಬ್ಬಂದಿಗಳು ಈ ವಿಷಯದಲ್ಲಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಆದರೆ, ಮ್ಯಾನೇಜರ್ ನವೀದ್ ಚೀಮಾ ಅವರು ಹೋಟೆಲ್ ಅಧಿಕಾರಿಗಳ ಕ್ಷಮೆಯಾಚಿಸಿ, ವಿಷಯವನ್ನು ತಂಡದ ಒಳಗೇ ಇತ್ಯರ್ಥಪಡಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವಕಪ್ ಅಭಿಯಾನದ ನಡುವೆ ವಿವಾದ ದೊಡ್ಡದಾಗಬಾರದೆಂಬ ಕಾರಣಕ್ಕೆ ಆಟಗಾರನ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ. ಆಟಗಾರನಿಗೆ ದಂಡ ವಿಧಿಸಿ ಪ್ರಕರಣವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದ್ದರೂ, ಈಗ ಈ ವಿಷಯ ಮಾಧ್ಯಮಗಳಲ್ಲಿ ಬಹಿರಂಗವಾಗಿರುವುದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಶಿಸ್ತು ಕ್ರಮದ ಎಚ್ಚರಿಕೆ
ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪುವಲ್ಲಿ ವಿಫಲವಾಗಿ ಈಗಾಗಲೇ ತವರಿಗೆ ಮರಳಿದೆ. ಈ ಬೆನ್ನಲ್ಲೇ ಈ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. “ಸಂಬಂಧಪಟ್ಟ ಆಟಗಾರನನ್ನು ಶಿಸ್ತು ಸಮಿತಿಯ ತನಿಖೆಗೆ ಒಳಪಡಿಸಲಾಗುವುದು ಮತ್ತು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪಿಸಿಬಿ ಮೂಲಗಳು ತಿಳಿಸಿವೆ.
ಹಳೆಯ ವಿವಾದಗಳ ನೆನಪು
ಪಾಕಿಸ್ತಾನಿ ಕ್ರಿಕೆಟಿಗರು ವಿದೇಶಿ ಪ್ರವಾಸಗಳಲ್ಲಿ ಇಂತಹ ವಿವಾದಗಳಿಗೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಇಂಗ್ಲೆಂಡ್ ಪ್ರವಾಸದ ವೇಳೆ ಹೈದರ್ ಅಲಿ ಮತ್ತು ಮಲೇಷ್ಯಾ ಪ್ರವಾಸದಲ್ಲಿ ಮಸಾಜ್ ತಜ್ಞ ಮಲಂಗ್ ಅಲಿ ಕೂಡ ಇಂತಹದ್ದೇ ಗಂಭೀರ ಆರೋಪಗಳನ್ನು ಎದುರಿಸಿದ್ದರು.
ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ ಅವರಂತಹ ಹಿರಿಯ ಆಟಗಾರರ ನಡುವಿನ ಶೀತಲ ಸಮರ ಹಾಗೂ ಮಂಡಳಿಯ ನಿರ್ಧಾರಗಳ ವಿರುದ್ಧ ಮೊಹಮ್ಮದ್ ಆಮಿರ್ ಮತ್ತು ಮೊಹಮ್ಮದ್ ಯೂಸುಫ್ ಅವರಂತಹ ಮಾಜಿ ಆಟಗಾರರು ಬಂಡಾಯವೆದ್ದಿದ್ದಾರೆ. ಈ ಎಲ್ಲಾ ಗೊಂದಲಗಳ ನಡುವೆ ‘ಹೋಟೆಲ್ ಹಗರಣ’ ಪಾಕಿಸ್ತಾನ ಕ್ರಿಕೆಟ್‌ನ ಘನತೆಯನ್ನು ಮಣ್ಣುಪಾಲು ಮಾಡಿದೆ.
ಇದನ್ನೂ ಓದಿ : ಸೆಮಿಫೈನಲ್ ಫೈಟ್ | ಬಟ್ಲರ್ ಫಾರ್ಮ್ ಬಗ್ಗೆ ಭಾರತಕ್ಕೆ ಎಚ್ಚರಿಕೆ.. ‘ನಿದ್ರಿಸುತ್ತಿರುವ ಸಿಂಹ’ ಎಚ್ಚರಗೊಳ್ಳುವ ಭೀತಿ!



















