ಕೊಲಂಬೋ : ಇರಾನ್ ಹಾಗೂ ಇಸ್ರೇಲ್ ಸೇನಾ ಸಂಘರ್ಷ ತೀವ್ರಗೊಂಡಿದ್ದು, ಭಾರತದ ನೆರೆಯ ಶ್ರೀಲಂಕಾ ಕರಾವಳಿವರೆಗೂ ಅದರ ಬಿಸಿ ತಟ್ಟಿದೆ. ಶ್ರೀಲಂಕಾ ಸಮುದ್ರ ಗಡಿಯೊಳಗೆ ಇರಾನ್‌ಗೆ ಸೇರಿದ ಹಡಗೊಂದಕ್ಕೆ ಬುಧವಾರ ಅಮೆರಿಕದ ಸಬ್‌ಮರೀನ್ ಮೂಲಕ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ದಾಳಿಯ ಪರಿಣಾಮ ಕನಿಷ್ಠ 100ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, 78 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯಿಂದ ಹಡಗಿಗೆ ತೀವ್ರ ಹಾನಿಯಾಗಿ ಮುಳುಗಿದೆ ಎನ್ನಲಾಗಿದೆ. ಇದಕ್ಕೂ ಮೊದಲು, ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿ, ಮುಳುಗುತ್ತಿರುವ ಇರಾನ್ ಹಡಗಿನಲ್ಲಿ ಇದ್ದ 30 ಮಂದಿಯನ್ನು ಶ್ರೀಲಂಕಾ ಸೇನೆ ರಕ್ಷಣೆ ಮಾಡಿದೆ ಎಂದು ತಿಳಿಸಿತ್ತು. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ. ದಾಳಿ ಹಿನ್ನಲೆ ಮತ್ತು ಕಾರಣಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಶ್ರೀಲಂಕಾ ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿ ಡಾ. ಅನಿಲ್ ಜಾಸಿಂಘೆ ಅವರು ನೀಡಿದ ಮಾಹಿತಿ ಪ್ರಕಾರ, ರಕ್ಷಣೆ ಮಾಡಲಾದವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ, ಏಳು ಮಂದಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
180 ಜನರಿದ್ದ ಐಆರ್ಐಎಸ್ ದೇನಾ ಹಡಗು ಸಂಕಷ್ಟದಲ್ಲಿದೆ ಎಂದು ಶ್ರೀಲಂಕಾ ನೌಕಾಪಡೆಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಹಡಗುಗಳು ಮತ್ತು ವಾಯುಪಡೆಯ ವಿಮಾನಗಳನ್ನು ಕಳುಹಿಸಿಕೊಡಲಾಯಿತು ಎಂದು ವಿದೇಶಾಂಗ ಸಚಿವ ವಿಜಿತಾ ಹೆರಾತ್ ತಿಳಿಸಿದ್ದಾರೆ.
ಇದನ್ನೂ ಓದಿ : ಪವಿತ್ರಾ ಗೌಡಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್!



















