ವಾಷಿಂಗ್ಟನ್ : ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ, ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಈ ದಾಳಿಗೆ ಶೀಘ್ರದಲ್ಲೇ ತಕ್ಕ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಆದರೆ, ಈ ಹಿಂದೆ ಇರಾನ್ ವಿರುದ್ಧದ ಕಾರ್ಯಾಚರಣೆಗೆ ಭೂಸೇನೆಯನ್ನು (ಕಾಲ್ದಳ) ಇಳಿಸುವ ಸುಳಿವು ನೀಡಿದ್ದ ಅವರು, ಇದೀಗ ತಮ್ಮ ನಿಲುವು ಬದಲಿಸಿದ್ದು, ಸದ್ಯಕ್ಕೆ ಸೇನೆಯನ್ನು ನೇರವಾಗಿ ಕಣಕ್ಕಿಳಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲಿನ ದಾಳಿ ಹಾಗೂ 6 ಅಮೆರಿಕನ್ ಯೋಧರ ಸಾವಿಗೆ ಇರಾನ್ ಶೀಘ್ರವೇ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಶನಿವಾರ ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ ‘ನ್ಯೂಯಾರ್ಕ್ ಪೋಸ್ಟ್’ ಜೊತೆ ಮಾತನಾಡಿದ್ದ ಟ್ರಂಪ್, “ನನಗೆ ಕಾಲ್ದಳವನ್ನು ಬಳಸುವ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲ, ಅಗತ್ಯವಿದ್ದರೆ ಖಂಡಿತ ಬಳಸುತ್ತೇನೆ” ಎಂದಿದ್ದರು. ಅಮೆರಿಕವನ್ನು ಯುದ್ಧಗಳಿಂದ ಮುಕ್ತಗೊಳಿಸುವ ತಮ್ಮ ಚುನಾವಣಾ ಭರವಸೆಗೆ ವ್ಯತಿರಿಕ್ತವಾಗಿ ಮಾತನಾಡಿದ್ದ ಅವರು, “ಇದು ಕೇವಲ ಆರಂಭವಷ್ಟೇ, ಅಸಲಿ ದೊಡ್ಡ ಅಲೆ ಇನ್ನೂ ಅಪ್ಪಳಿಸಿಲ್ಲ” ಎಂದು ಭಾರೀ ವಾಯುದಾಳಿಯ ಮುನ್ಸೂಚನೆಯನ್ನೂ ನೀಡಿದ್ದರು. ಆದರೆ ಇದೀಗ ಕಾಲ್ದಳದ ಅಗತ್ಯ ಬೀಳದಿರಬಹುದು ಎನ್ನುವ ಮೂಲಕ ತಮ್ಮ ಹಿಂದಿನ ಹೇಳಿಕೆಯಿಂದ ಅಚ್ಚರಿಯ ರೀತಿಯಲ್ಲಿ ಹಿಂದೆ ಸರಿದಿದ್ದಾರೆ.
ಯುದ್ಧ ವಿಸ್ತರಣೆಯ ಸುಳಿವು
ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯು ಕೇವಲ ಅಂದಾಜಿಸಲಾಗಿದ್ದ ನಾಲ್ಕೈದು ವಾರಗಳಿಗೆ ಸೀಮಿತವಾಗಿರುವುದಿಲ್ಲ, ಅದನ್ನು ಮತ್ತಷ್ಟು ದೀರ್ಘಕಾಲದವರೆಗೆ ವಿಸ್ತರಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಸೋಮವಾರ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಈ ಭೀಕರ ದಾಳಿಗಳಲ್ಲಿ ಈವರೆಗೆ ಆರು ಮಂದಿ ಅಮೆರಿಕನ್ ಯೋಧರು ಹಾಗೂ ಇರಾನ್‌ನ 555 ನಾಗರಿಕರು ಸಾವನ್ನಪ್ಪಿದ್ದಾರೆ. ಮೊದಲ ಬಾರಿಗೆ ತಮ್ಮ ಕಾರ್ಯಾಚರಣೆಯ ಗುರಿಗಳನ್ನು ವಿವರಿಸಿರುವ ಟ್ರಂಪ್, ಇರಾನ್‌ನ ಕ್ಷಿಪಣಿಗಳು, ನೌಕಾಪಡೆ, ಪರಮಾಣು ಕಾರ್ಯಕ್ರಮಗಳನ್ನು ನಾಶಪಡಿಸುವುದು ಮತ್ತು ಪ್ರಾದೇಶಿಕ ಸಶಸ್ತ್ರ ಗುಂಪುಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ತಡೆಯುವುದು ಅಮೆರಿಕದ ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ. ಆದರೆ ಇರಾನ್ ಆಡಳಿತವನ್ನು ಉರುಳಿಸುವುದು ತಮ್ಮ ಗುರಿಯಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಜಾಗತಿಕ ಆರ್ಥಿಕತೆಗೆ ಕಂಟಕ
ಶನಿವಾರದಿಂದ ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಅಮೆರಿಕ ಮತ್ತು ಇಸ್ರೇಲ್ ಪಡೆಗಳು, ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಮಧ್ಯಪ್ರಾಚ್ಯದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಚುರುಕುಗೊಳಿಸಿದೆ. ಜಾಗತಿಕ ತೈಲ ಸಾಗಣೆಯ ಶೇ. 20ರಷ್ಟು ಪಾಲು ಹೊಂದಿರುವ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದಾಗಿ ಎಚ್ಚರಿಸಿರುವ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಜನರಲ್ ಸರ್ದಾರ್ ಜಬ್ಬಾರಿ, “ಈ ಮಾರ್ಗವಾಗಿ ಸಾಗುವ ಯಾವುದೇ ಹಡಗನ್ನಾದರೂ ನಾವು ಸುಟ್ಟುಹಾಕುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ. ಇದು ಜಾಗತಿಕ ತೈಲ ಬೆಲೆ ಏರಿಕೆಗೆ ಹಾಗೂ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಲಿದೆ.
ಯುದ್ಧಕ್ಕೆ ಅಮೆರಿಕ ಧುಮುಕಿದ್ದೇಕೆ? ರೂಬಿಯೊ ಸ್ಪಷ್ಟನೆ
ಈ ನಾಲ್ಕು ದಿನಗಳ ಭೀಕರ ಯುದ್ಧದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗಿದ್ದರ ಕುರಿತು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಹೊಸ ಮಾಹಿತಿ ಬಿಚ್ಚಿಟ್ಟಿದ್ದಾರೆ. “ನಮ್ಮ ಮಿತ್ರರಾಷ್ಟ್ರ ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಲು ಸಜ್ಜಾಗಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿತ್ತು. ಇಸ್ರೇಲ್ ದಾಳಿ ಮಾಡಿದರೆ, ಇರಾನ್ ತಕ್ಷಣವೇ ನಮ್ಮ ಮೇಲೂ ಮುಗಿಬೀಳುತ್ತದೆ ಎಂಬ ಖಚಿತ ಮಾಹಿತಿಯ ಮೇರೆಗೆ, ಮುಂಜಾಗ್ರತಾ ಕ್ರಮವಾಗಿ ಅಮೆರಿಕ ಕೂಡ ಈ ಕಾರ್ಯಾಚರಣೆಯಲ್ಲಿ ಕೈಜೋಡಿಸಿತು” ಎಂದು ರೂಬಿಯೊ ಅಮೆರಿಕದ ಜನಪ್ರತಿನಿಧಿಗಳಿಗೆ ವಿವರಣೆ ನೀಡುವ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳ ಅರೆಸ್ಟ್!



















