ಬೆಂಗಳೂರು | ಹೆಬ್ಬಗೋಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳ ಸೇರಿ ಮೂವರನ್ನು ಬಂಧಿಸಿದ್ದಾರೆ. ಪಾಂಡ್ಯ ರಾಜು, ಪೃಥ್ವಿ, ಮಂಜುನಾಥ್ ಬಂಧಿತ ಆರೋಪಿಗಳು.
ಈ ಬಂಧಿತ ಆರೋಪಿಗಳು ಲಾಕ್ ಆಗಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ಇತ್ತೀಚೆಗೆ ಕಳ್ಳತನ ಮಾಡಿ ಗ್ಯಾಂಗ್ ಪರಾರಿಯಾಗಿತ್ತು. ಮನೆಯವರು ಕಾಶಿ ಯಾತ್ರೆಗೆ ಹೋಗಿದ್ದ ವೇಳೆ ಬಂದ ಮೂವರು ಚಿನ್ನಾಭರಣ, ಹಣ ದೋಚಿದ್ದರು.
ಮನೆಯವರು ಕಾಶಿಯಾತ್ರೆಯಿಂದ ವಾಪಸ್ ಆದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿತ್ತು.
ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರ ಪೈಕಿ ಪಾಂಡ್ಯರಾಜು ಮೇಲೆ ಅಮೃತಹಳ್ಳಿ, ವೈಟ್ ಫೀಲ್ಡ್, ಕಲಾಸಿಪಾಳ್ಯ, ಬೆಳ್ಳಂದೂರಿನಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಗಳಿಂದ 44 ಲಕ್ಷ ಮೌಲ್ಯದ 3 ಕೆಜಿ ಬೆಳ್ಳಿ, 220 ಗ್ರಾಂ ಚಿನ್ನ ಸೀಜ್ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಕೇತುಗ್ರಸ್ಥ ಚಂದ್ರಗ್ರಹಣವಿದ್ದರೂ ರಾಯರ ಭಕ್ತರಿಗಿಲ್ಲ ಯಾವುದೇ ತೊಂದರೆ!



















