ಬೆಂಗಳೂರು: ಗಾಯತ್ರಿನಗರದಲ್ಲಿ ಬೆಂಕಿ ಅವಘಡ ಸಂಭವಿಸಿ ಒಬ್ಬ ಮಹಿಳೆ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಈ ಘಟನೆ ಸುಬ್ರಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ನಡೆದಿದೆ.
ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದ ಕಂಟ್ರಾಕ್ಟರ್ ರಮೇಶ್ ಬಾಬು ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂರನೇ ಮಹಡಿಯ ಅಡುಗೆ ಮನೆಯಲ್ಲಿ ಅವಘಡ ಉಂಟಾಗಿದೆ. ಮೊದಲ ಮತ್ತು ಎರಡನೇ ಮಹಡಿಯನ್ನು ಬಾಡಿಗೆಗೆ ನೀಡಲಾಗಿದ್ದು, ಮೂರನೇ ಹಾಗೂ ನಾಲ್ಕನೇ ಮಹಡಿಯಲ್ಲಿ ಡೂಪ್ಲೆಕ್ಸ್ ಮನೆಯಲ್ಲಿ ರಮೇಶ್ ಬಾಬು ತಮ್ಮ ಪತ್ನಿ ಹಾಗೂ ತಾಯಿ ಜೊತೆ ವಾಸವಾಗಿದ್ದರು.
ಅಗ್ನಿ ಅವಘಡದಲ್ಲಿ ಪತ್ನಿ ಸವಿತಾ (53) ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮನೆಯಲ್ಲಿ ಸಿಲುಕಿಕೊಂಡಿದ್ದ ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಮಗನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.
ಬೆಂಕಿ ಹತ್ತಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಮೂವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ ಹಾಗೂ ಸುಬ್ರಮಣ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಆತಂಕದ ಮಧ್ಯೆ ಅಬುಧಾಬಿಯಿಂದ ಬೆಂಗಳೂರಿಗೆ ಬಂದಿಳಿದ ವಿಮಾನ | 230 ಕನ್ನಡಿಗರು ತಾಯ್ನಾಡಿಗೆ



















