ರಿಯಾದ್ : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ತೀವ್ರಗೊಳ್ಳುತ್ತಿದೆ. ಇರಾನ್ ಮತ್ತು ಇಸ್ರೇಲ್-ಅಮೆರಿಕ ಜಂಟಿ ಪಡೆಗಳ ನಡುವಿನ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸಿದ್ದು, ಇದೀಗ ಸೌದಿ ಅರೇಬಿಯಾದಲ್ಲಿರುವ ವಿಶ್ವದ ಅತಿ ದೊಡ್ಡ ತೈಲ ಕಂಪನಿ ‘ಅರಾಮ್ಕೊ‘ದ ಮೇಲೆಯೇ ಇರಾನ್ ಡ್ರೋನ್ ದಾಳಿ ನಡೆಸಿದೆ. ಡ್ರೋನ್ ದಾಳಿಯ ನಂತರ ತನ್ನ ರಾಸ್ ತನುರಾ ಸಂಸ್ಕರಣಾಗಾರವನ್ನು ಸೌದಿ ಅರಾಮ್ಕೊ ಮುಚ್ಚಿದೆ ಎಂದು ವರದಿಯಾಗಿದೆ.
ಗಲ್ಫ್ ಕೊಲ್ಲಿಯಲ್ಲಿರುವ ರಾಸ್ ತನುರಾ ಕಾಂಪ್ಲೆಕ್ಸ್ ಮಧ್ಯಪ್ರಾಚ್ಯದ ಅತಿದೊಡ್ಡ ಸಂಸ್ಕರಣಾಗಾರಗಳ ಪೈಕಿ ಒಂದಾಗಿದ್ದು, ಇದು ದಿನಕ್ಕೆ 550,000 ಬ್ಯಾರೆಲ್‌ಗಳ (bpd) ಕಚ್ಚಾ ತೈಲವನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ ಸೌದಿಯ ಕಚ್ಚಾ ತೈಲವನ್ನು ರಫ್ತು ಮಾಡುವ ಪ್ರಮುಖ ಟರ್ಮಿನಲ್ ಆಗಿಯೂ ಕೆಲಸ ಮಾಡುತ್ತದೆ. ಡ್ರೋನ್ ದಾಳಿಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಘಟಕವನ್ನು ಮುಚ್ಚಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಇರಾನ್ ಆರಂಭದಲ್ಲಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡಿತ್ತು. ಆದರೆ ಈಗ ಸೌದಿ, ಯುಎಇ, ಕತಾರ್, ಕುವೈತ್, ಬಹರೇನ್ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಸೌದಿ ಅಮೆರಿಕ ಯುದ್ಧ ವಿಮಾನಗಳಿಗೆ ಲಾಜಿಸ್ಟಿಕ್ ಸಹಕಾರ ನೀಡುತ್ತಿದೆ. ಮುಖ್ಯವಾಗಿ ಇಂಧನವನ್ನು ಪೂರೈಸುತ್ತಿದೆ. ಈ ಕಾರಣಕ್ಕೆ ಸಿಟ್ಟಾಗಿರುವ ಇರಾನ್ ಈಗ ಸೌದಿ ತೈಲ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಸೌದಿ ಅರಾಮ್ಕೊದ ತೈಲ ಸಂಸ್ಕರಣಾ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದಿರುವುದು ಇದು ಹೊಸದೆನಲ್ಲ. ಈ ಹಿಂದೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಅರಾಮ್ಕೊದ ಅತಿದೊಡ್ಡ ತೈಲ ಸಂಸ್ಕರಣಾ ಘಟಕಗಳಾದ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ಗಳ ಮೇಲೆ ದಾಳಿ ನಡೆಸಿದ್ದರು. ಘಟಕಗಳನ್ನು ಗುರಿಯಾಗಿಸಿಕೊಂಡು 10 ಡ್ರೋನ್‍ಗಳನ್ನು ಹಾರಿಸಿ ದಾಳಿ ಮಾಡಿದ್ದರು. ಸೌದಿ ಅರಾಮ್ಕೊ ವಿಶ್ವದ ಅತಿ ದೊಡ್ಡ ತೈಲ ಕಂಪನಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕಿತ್ತಾಟದಿಂದ ಬ್ರೆಂಟ್ ಕಚ್ಚಾ ತೈಲದ ಫ್ಯೂಚರ್ LCOc1 ಬೆಲೆ 10% ಏರಿಕೆಯಾಗಿದೆ.
ಇದನ್ನೂ ಓದಿ : ಅವಳಿ ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ!


















