ಉದಯಪುರ : ದಕ್ಷಿಣ ಭಾರತದ ಖ್ಯಾತ ತಾರಾ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿವಾಹವು ಇಂದು (ಫೆಬ್ರವರಿ 26) ರಾಜಸ್ಥಾನದ ಉದಯಪುರದ ಐಷಾರಾಮಿ ಹೋಟೆಲ್ ‘ಐಟಿಸಿ ಮೆಮೆಂಟೋಸ್’ನಲ್ಲಿ ನೆರವೇರಿದೆ. ಇಲ್ಲಿ ನಡೆದ ಅತ್ಯಂತ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಹಸೆಮಣೆ ಏರಿದ್ದು, ಚಿತ್ರರಂಗದ ಆಪ್ತರು ಹಾಗೂ ಕುಟುಂಬದ ಸದಸ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

ತೆಲುಗು ಮತ್ತು ಕೊಡವ ಸಂಪ್ರದಾಯದ ಸಮ್ಮಿಲನ
ತಮ್ಮ ವೈವಿಧ್ಯಮಯ ಸಂಸ್ಕೃತಿಗಳನ್ನು ಗೌರವಿಸುವ ನಿಟ್ಟಿನಲ್ಲಿ ಈ ದಂಪತಿ ಎರಡು ವಿಭಿನ್ನ ಶೈಲಿಯ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇಂದು ಬೆಳಿಗ್ಗೆ ವಿಜಯ್ ದೇವರಕೊಂಡ ಅವರ ಕುಟುಂಬದ ಸಂಪ್ರದಾಯದಂತೆ ಅತ್ಯಂತ ಶ್ರದ್ಧಾಭಕ್ತಿಯಿಂದ ‘ತೆಲುಗು ವಿವಾಹ’ ನೆರವೇರಿದೆ. ಸಂಜೆ ರಶ್ಮಿಕಾ ಮಂದಣ್ಣ ಅವರ ತವರು ಕೊಡಗಿನ ಶೈಲಿಯಲ್ಲಿ ‘ಕೊಡವ ವಿವಾಹ’ ನಡೆಯಲಿದ್ದು, ಕೊಡಗಿನ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ಜೋಡಿ ಮಿಂಚಲಿದೆ. ಈ ಮೂಲಕ ಈ ವಿವಾಹವು ಎರಡು ವಿಭಿನ್ನ ಸಂಸ್ಕೃತಿಗಳ ಸುಂದರ ಸಮ್ಮಿಲನಕ್ಕೆ ವೇದಿಕೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ‘ವಿರೋಶ್’ (VIROSH) ಎಂದು ಕರೆಯುತ್ತಿದ್ದರು. ಅದೇ ಹೆಸರನ್ನು ತಮ್ಮ ವಿವಾಹಕ್ಕೂ ಇಟ್ಟಿರುವ ನವಜೋಡಿ, “ನೀವು ನಮಗೆ ನೀಡಿದ ಈ ಹೆಸರನ್ನು ನಾವು ನಮ್ಮ ಜೀವನದ ಈ ಸುಂದರ ಘಟ್ಟಕ್ಕೆ ಗೌರವಪೂರ್ವಕವಾಗಿ ಅರ್ಪಿಸುತ್ತಿದ್ದೇವೆ” ಎಂದು ಜಂಟಿ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 22 ರಂದು ಅಧಿಕೃತವಾಗಿ ತಮ್ಮ ಮದುವೆಯ ವಿಚಾರವನ್ನು ಹಂಚಿಕೊಂಡಿದ್ದ ಈ ಜೋಡಿ, ಪ್ರೀತಿಯಿಂದ ಹರಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶುಭಾಶಯ
ಈ ವಿವಾಹದ ಮತ್ತೊಂದು ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ನವಜೋಡಿಗೆ ಶುಭಾಶಯ ಪತ್ರ ಕಳುಹಿಸಿ ಹರಸಿದ್ದಾರೆ. ವಿಜಯ್ ದೇವರಕೊಂಡ ಅವರ ಪೋಷಕರಿಗೆ ಬರೆದ ಪತ್ರದಲ್ಲಿ ಪ್ರಧಾನಿಯವರು, “ವಿಜಯ್ ಮತ್ತು ರಶ್ಮಿಕಾ ಅವರು ಬೆಳ್ಳಿತೆರೆಯ ಮೇಲೆ ಮೂಡಿಸಿದ ಮ್ಯಾಜಿಕ್‌ಗಿಂತ ಈ ನೈಜ ಜೀವನದ ದೈವಿಕ ಅಧ್ಯಾಯವು ಹೆಚ್ಚು ಪ್ರಕಾಶಮಾನವಾಗಿರಲಿ” ಎಂದು ಆಶಿಸಿದ್ದಾರೆ. ಅಲ್ಲದೆ, ದಂಪತಿಗಳು ಪರಸ್ಪರರ ಶಕ್ತಿಯಾಗಿ ಬೆಳೆಯಲಿ ಎಂದೂ ಹಾರೈಸಿದ್ದಾರೆ.
ತಾರಾ ಗಣಗಳ ಉಪಸ್ಥಿತಿ
ಉದಯಪುರದ ಅರಾವಳಿ ಬೆಟ್ಟಗಳ ಸಾಲಿನಲ್ಲಿರುವ ಈ ಸುಂದರ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ತರುಣ್ ಭಾಸ್ಕರ್, ರಾಹುಲ್ ರವೀಂದ್ರನ್, ನಟಿಯರಾದ ಈಶಾ ರೆಬ್ಬಾ, ಆಶಿಕಾ ರಂಗನಾಥ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ. ಕಳೆದ ಮೂರು ದಿನಗಳಿಂದ ಜಪಾನೀಸ್ ಡಿನ್ನರ್, ಪೂಲ್ ವಾಲಿಬಾಲ್ ಮತ್ತು ‘ವಿರೋಶ್ ಪ್ರೀಮಿಯರ್ ಲೀಗ್’ ಎಂಬ ಕ್ರಿಕೆಟ್ ಪಂದ್ಯಾವಳಿಗಳ ಮೂಲಕ ವಿವಾಹದ ಸಂಭ್ರಮ ಕಳೆಗಟ್ಟಿತ್ತು. 2018ರ ‘ಗೀತ ಗೋವಿಂದಂ’ ಚಿತ್ರದ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದ ಈ ಜೋಡಿ, ಇದೀಗ ನಿಜ ಜೀವನದ ಪಯಣ ಆರಂಭಿಸಿದೆ.
ಇದನ್ನೂ ಓದಿ : ಭಾರತದ ವಿರುದ್ಧದ ಆರೋಪಗಳನ್ನು ಕೈಬಿಟ್ಟ ಕೆನಡಾ | ಪ್ರಧಾನಿ ಕಾರ್ನಿ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ



















