ನವದೆಹಲಿ : 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ಉಲ್ಲೇಖಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಇದೀಗ “ಸಂಸ್ಥೆಯನ್ನು ದೂಷಿಸಲು ಯಾರನ್ನೂ ಬಿಡುವುದಿಲ್ಲ” ಎಂದು ಎಚ್ಚರಿಸಿದ್ದು, ತತ್‌ಕ್ಷಣದಿಂದಲೇ ಪುಸ್ತಕವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು “ತಲೆದಂಡವಾಗಲೇಬೇಕು” ಎಂದು ಕೇಂದ್ರ ಸರ್ಕಾರ ಹಾಗೂ ಎನ್‌ಸಿಇಆರ್‌ಟಿ (NCERT)ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠ ಖಡಕ್ ಸೂಚನೆ ನೀಡಿದೆ.
ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದ ಪಾತ್ರ’ ಎಂಬ ಅಧ್ಯಾಯದಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿರುವುದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ. ಇದು ವ್ಯವಸ್ಥಿತ ಪಿತೂರಿಯಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು, ಈ ಬಗ್ಗೆ ಆಳವಾದ ತನಿಖೆಯ ಅಗತ್ಯವಿದೆ ಎಂದು ಹೇಳಿದೆ. ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಇಂತಹ ಅಂಶಗಳು ಪಠ್ಯದಲ್ಲಿ ಸೇರ್ಪಡೆಯಾಗಲು ಯಾರು ಜವಾಬ್ದಾರರು ಎಂಬುದನ್ನು ಪತ್ತೆಹಚ್ಚುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪೀಠವು ನಿರ್ದೇಶನ ನೀಡಿದೆ.
ಜಾಗತಿಕ ಮಟ್ಟದಲ್ಲಿ ನಿಷೇಧ ಮತ್ತು ಮುಟ್ಟುಗೋಲು
ನ್ಯಾಯಾಲಯವು ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಈ ಪಠ್ಯಪುಸ್ತಕದ ಬಳಕೆಯನ್ನು ನಿಷೇಧಿಸಿದೆ. ಮಾರುಕಟ್ಟೆಯಲ್ಲಿರುವ ಎಲ್ಲಾ ಪ್ರತಿಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಅಂತರ್ಜಾಲದಲ್ಲಿ ಈ ಪುಸ್ತಕದ ಯಾವುದೇ ಭಾಗವನ್ನು ಹಂಚಿಕೊಳ್ಳದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಎನ್‌ಸಿಇಆರ್‌ಟಿ ಅಧ್ಯಕ್ಷ ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ ಮತ್ತು ಕೇಂದ್ರ ಸರ್ಕಾರಕ್ಕೆ ಈ ಕುರಿತು ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.
ಕ್ಷಮೆಯಾಚನೆ ಸಾಲದು ಎಂದ ನ್ಯಾಯಪೀಠ
ಎನ್‌ಸಿಇಆರ್‌ಟಿ ಈ ತಪ್ಪನ್ನು ಒಪ್ಪಿಕೊಂಡು ಪತ್ರಿಕಾ ಪ್ರಕಟಣೆ ಹೊರಡಿಸಿದ್ದರೂ, ಅದರಲ್ಲಿ ಸ್ಪಷ್ಟವಾದ ಕ್ಷಮೆಯಾಚನೆ ಇಲ್ಲದಿರುವುದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅವರು ಗುಂಡು ಹಾರಿಸಿದ್ದಾರೆ, ಈಗ ನ್ಯಾಯಾಂಗ ರಕ್ತಸ್ರಾವವಾಗುತ್ತಿದೆ” ಎಂದು ಮಾರ್ಮಿಕವಾಗಿ ನುಡಿದ ಅವರು, ಕೇವಲ ವಿಷಾದ ವ್ಯಕ್ತಪಡಿಸುವುದು ಸಾಲದು ಎಂದು ಕಿಡಿಕಾರಿದ್ದಾರೆ. ಇನ್ನು ಮುಂದೆ ಈ ಪಠ್ಯದ ರಚನೆಯಲ್ಲಿ ಭಾಗಿಯಾದವರು ಯಾವುದೇ ಸಚಿವಾಲಯ ಅಥವಾ ಯುಜಿಸಿಯೊಂದಿಗೆ ಕೆಲಸ ಮಾಡದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.
ತಜ್ಞರು, ವಕೀಲರ ಆಕ್ಷೇಪ
ಈ ವಿವಾದಾತ್ಮಕ ಪಠ್ಯದ ಬಗ್ಗೆ ಕಾನೂನು ತಜ್ಞರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಆಡಳಿತದ ಅಂಗಗಳ ಬಗ್ಗೆ ಮೂಲಭೂತ ಅರಿವು ಮೂಡಿಸಬೇಕೇ ಹೊರತು, ವಿಷಯವನ್ನು ಅನಗತ್ಯವಾಗಿ ಸಂಕೀರ್ಣಗೊಳಿಸಬಾರದು ಎಂದು ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಹೇಳಿದ್ದಾರೆ. ನ್ಯಾಯಾಂಗವು ಪ್ರಜಾಪ್ರಭುತ್ವವನ್ನು ರೂಪಿಸುವಲ್ಲಿ ವಹಿಸಿದ ಧನಾತ್ಮಕ ಪಾತ್ರವನ್ನು ವಿವರಿಸುವ ಬದಲು, ವಿಮರ್ಶಾತ್ಮಕ ವಿಶ್ಲೇಷಣೆಯಿಲ್ಲದೆ ಭ್ರಷ್ಟಾಚಾರದಂತಹ ವಿಷಯಗಳನ್ನು ಸೇರಿಸಿರುವುದು ತಪ್ಪು ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಅಧ್ಯಾಯವನ್ನು ಪರಿಷ್ಕರಿಸುವುದಾಗಿ ಸರ್ಕಾರ ಕೋರ್ಟ್‌ಗೆ ತಿಳಿಸಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ.
ಇದನ್ನೂ ಓದಿ : ವೈದ್ಯಕೀಯ ಲೋಕದ ಮಹಾನ್ ಪವಾಡ | ಗರ್ಭಾಶಯ ಇಲ್ಲದೆಯೇ ಜನಿಸಿದ ಮಹಿಳೆಯೀಗ ತಾಯಿ!



















