ಬೆಂಗಳೂರು : ದೇಶಾದ್ಯಂತ ಇಂದು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಮರುಪರೀಕ್ಷೆ ನಡೆಯುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಟ್ಟುನಿಟ್ಟಿನ ಭದ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುತ್ತಿದೆ.
ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಬೆಂಗಳೂರಿನಲ್ಲೂ 46 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮಲ್ಲೇಶ್ವರಂ ಸರ್ಕಾರಿ ಪಿಯು ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಈ ಬಾರಿ ಪ್ರಶ್ನೆಪತ್ರಿಕೆಗಳನ್ನು ಮೊದಲ ಬಾರಿಗೆ ಭಾರತೀಯ ವಾಯುಪಡೆಯ ಮೂಲಕ ಸಾಗಾಟ ಮಾಡಲಾಗಿದ್ದು, ಕೇಂದ್ರ ಸಶಸ್ತ್ರ ಪಡೆಗಳ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಆರ್‌ಪಿಎಫ್ ಹಾಗೂ ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪ್ರತಿ ಕೊಠಡಿಯಲ್ಲಿ 12 ರಿಂದ 24 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ಇನ್ವಿಜಿಲೇಟರ್‌ಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.
NTA ಕೈಗೊಂಡ ಪ್ರಮುಖ ಕ್ರಮಗಳು
ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ
- ಅಭ್ಯರ್ಥಿಗಳಿಗೆ ದೈಹಿಕ ತಪಾಸಣೆ
- ಬೆರಳಚ್ಚು ಅಥವಾ ಮುಖ ಗುರುತಿಸುವಿಕೆ ಮೂಲಕ ಪರಿಶೀಲನೆ
- ಪರಿಶೀಲನೆ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶ
- ಡ್ರೆಸ್ ಕೋಡ್ ಕಡ್ಡಾಯ ಜಾರಿ
ಪ್ರಶ್ನೆಪತ್ರಿಕೆ ಸಾಗಾಟದಲ್ಲಿ ಭದ್ರತೆ
- ಭಾರತೀಯ ವಾಯುಪಡೆಯ ಮೂಲಕ ಸಾಗಾಟ
- CRPF ಮತ್ತು CISF ಭದ್ರತೆ
- ಎಐ ಆಧಾರಿತ ಸಿಸಿಟಿವಿ ನಿಗಾ
- ಕಟ್ಟುನಿಟ್ಟಿನ ಬಯೋಮೆಟ್ರಿಕ್ ಪರಿಶೀಲನೆ
ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರ
- ಮೆಟಲ್ ಡಿಟೆಕ್ಟರ್ ಅಳವಡಿಕೆ
- ಆಧಾರ್ ಲಿಂಕ್ಡ್ ಬಯೋಮೆಟ್ರಿಕ್ ವ್ಯವಸ್ಥೆ
- ಲೈವ್ ಫೇಸ್ ರೆಕಗ್ನಿಷನ್ ತಂತ್ರಜ್ಞಾನ
- ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾಗಳು
- ಪ್ರತಿ ಕೊಠಡಿಯಲ್ಲಿ ನಾಲ್ಕು ಹಂತದ ಕಣ್ಗಾವಲು
- ಕೇಂದ್ರ ಕಚೇರಿಯಿಂದ ನೇರ ಮೇಲ್ವಿಚಾರಣೆ
ಸೋರಿಕೆ ತಡೆಗೆ ವಿಶೇಷ ನಿಗಾ
- ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಣೆ
- ನಕಲಿ ಸುದ್ದಿ ಮತ್ತು ವದಂತಿ ತಡೆಗೆ ವಿಶೇಷ ಜಾಗ್ರತಾ ದಳ
- ಅಕ್ರಮಗಳಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ
- ಅಭ್ಯರ್ಥಿಗಳಿಗೆ ವದಂತಿಗಳಿಗೆ ಕಿವಿಗೊಡದಂತೆ ಸೂಚನೆ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ದೇಶದ ಗಮನ ಸೆಳೆದಿರುವ ಈ ನೀಟ್ ಮರುಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಕೇಂದ್ರ ಸರ್ಕಾರ ಮತ್ತು NTA ಉನ್ನತ ಮಟ್ಟದ ನಿಗಾ ವಹಿಸಿವೆ.



















