ಗುವಾಹಟಿ : ಅಸ್ಸಾಂನ ಸಿಲ್ಚಾರ್ ಪಟ್ಟಣದ ಸಮೀಪ 28 ವರ್ಷದ ಯುವತಿಯ ಮೇಲೆ 7 ಮಂದಿ ರಾಕ್ಷಸರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಈ ಪ್ರಕರಣ ಇದೀಗ ಭಾರೀ ಸದ್ದು ಮಾಡುತ್ತಿದೆ. ಸಂಜೆ ವೇಳೆ ಗೆಳೆಯನೊಂದಿಗೆ ಹೊರಗೆ ಹೋಗಿದ್ದ ಯುವತಿಯನ್ನು ಅಡ್ಡಗಟ್ಟಿದ ಕಾಮುಕರು, ಆಕೆಯ ಮೇಲೆ ಪಾಶವೀಯ ಕೃತ್ಯ ಎಸಗಿದ್ದಲ್ಲದೆ, ಹಣವನ್ನೂ ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಈಗಾಗಲೇ ಪೊಲೀಸ್ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಫೆ.19ರಂದು ಸಂತ್ರಸ್ತ ಯುವತಿಯು ತನ್ನ ಗೆಳೆಯನೊಂದಿಗೆ ಸಿಲ್ಚಾರ್ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಬೈಪಾಸ್ ರಸ್ತೆಯ ಬಳಿ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಮಹೀಂದ್ರಾ ಥಾರ್ ವಾಹನದಲ್ಲಿ ಬಂದ ದುಷ್ಕರ್ಮಿಗಳ ಗುಂಪು ಇವರ ಮೇಲೆ ಹಠಾತ್ ದಾಳಿ ನಡೆಸಿದೆ. ಆರಂಭದಲ್ಲಿ ವಿಳಾಸ ಕೇಳುವ ನೆಪದಲ್ಲಿ ಬಂದ ಅವರು, ನಂತರ ಚಾಕು ತೋರಿಸಿ ಯುವತಿ ಮತ್ತು ಆಕೆಯ ಗೆಳೆಯನನ್ನು ಬೆದರಿಸಿದ್ದಾರೆ. ಸುಮಾರು ಏಳರಿಂದ ಎಂಟು ಮಂದಿ ಇದ್ದ ಈ ಗುಂಪು, ಗೆಳೆಯನನ್ನು ಬಲವಂತವಾಗಿ ಹಿಡಿದಿಟ್ಟುಕೊಂಡು ಆತನ ಕಣ್ಣೆದುರೇ ಯುವತಿಯ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ದೌರ್ಜನ್ಯದ ನಂತರ ಹಣ ಸುಲಿಗೆ
ಕೃತ್ಯದ ನಂತರ ಆರೋಪಿಗಳು ಯುವತಿಯನ್ನು ಬೆದರಿಸಿ ಆಕೆಯ ಬ್ಯಾಂಕ್ ಖಾತೆಯಿಂದ 10,000 ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾಯಿಸುವಂತೆ ಬೆದರಿಸಿದ್ದಾರೆ. ಹಣ ಪಡೆದ ನಂತರವಷ್ಟೇ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಯುವತಿ ನಂತರ ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಬ್ಬರು ಆರೋಪಿಗಳ ಬಂಧನ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಂತ್ರಸ್ತ ಯುವತಿಯ ಹೇಳಿಕೆ ಆಧರಿಸಿ ಆಶ್ರಮ ರಸ್ತೆ ನಿವಾಸಿಗಳಾದ ನೀಲೋತ್ಪಲ್ ದಾಸ್ (25) ಮತ್ತು ಸುಬೋಲ್ ದಾಸ್ (27) ಎಂಬವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲಾಗಿದೆ.
ಈ ಘಟನೆಯು ಅಸ್ಸಾಂನಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಗ್ರಹಿಸುತ್ತಿದ್ದಾರೆ. ರಾಜಕೀಯ ವಲಯದಲ್ಲೂ ಕಿಡಿ ಹೊತ್ತಿಕೊಂಡಿದ್ದು, ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್ ಅವರು ರಾಜ್ಯದ ಗೃಹ ಸಚಿವರೂ ಆಗಿರುವ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಗಳ ವೇಳೆ ವಿಐಪಿಗಳಿಗೆ ಸಿಗುವ ಭದ್ರತೆ ಸಾಮಾನ್ಯ ಜನರಿಗೆ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ.
ವರದಿಗಾರನ ಮೇಲೆ ಹಲ್ಲೆ
ಈ ಘಟನೆ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತ ಸುರಜಿತ್ ಚಕ್ರವರ್ತಿ ಎಂಬವರ ಮೇಲೆ ಆರೋಪಿಗಳ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಸ್ಥಳೀಯ ಉದ್ಯಮಿ ಅರವಿಂದ ದಾಸ್ ಎಂಬವರು ಪತ್ರಕರ್ತನಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಇದನ್ನೂ ಓದಿ : 130 ಕೋಟಿಗೂ ಅಧಿಕ ಆಸ್ತಿ.. ವಿಜಯ್-ರಶ್ಮಿಕಾ ಜೋಡಿಯ ಐಷಾರಾಮಿ ಜೀವನದ ಇಣುಕುನೋಟ



















