ನವದೆಹಲಿ : ಕಡಿಮೆ ಸಂಬಳ ಇರುತ್ತದೆ. ಪ್ರತಿ ತಿಂಗಳು ಕಮಿಟ್ ಮೆಂಟ್ ತುಂಬ ಇರುತ್ತವೆ. ಇಂತಹ ಸಂದರ್ಭದಲ್ಲಿ ದೊಡ್ಡ ಮೊತ್ತವನ್ನು ಉಳಿಕೆ ಮಾಡಲು ಆಗುವುದಿಲ್ಲ. ಲಕ್ಷಾಂತರ ರೂಪಾಯಿ ಗಳಿಕೆ ಮಾಡಲು ಆಗುವುದಿಲ್ಲ. ಆದರೆ, ಸಣ್ಣ ಉಳಿತಾಯದ ಮೂಲಕ ಜನಸಾಮಾನ್ಯರು ಲಕ್ಷಾಂತರ ರೂ. ಗಳಿಕೆ ಮಾಡಬಹುದಾಗಿದೆ. ಹೌದು, ಸಣ್ಣ ಉಳಿತಾಯಗಾರರಿಗೆ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆಯ ಅವಕಾಶವನ್ನು ಅಂಚೆ ಕಚೇರಿಯ ರೆಕರಿಂಗ್ ಡಿಪಾಸಿಟ್ (RD) ಯೋಜನೆ ನೀಡುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಪ್ರತಿ ತಿಂಗಳು ಕನಿಷ್ಠ 100 ರೂಪಾಯಿಗಳಿಂದ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ಹೂಡಿಕೆ ಮಾಡಬಹುದು.
ಒಂದು ವೇಳೆ ನೀವು ಪ್ರತಿ ತಿಂಗಳು 3,500 ರೂಪಾಯಿಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ 2.55 ಲಕ್ಷ ರೂಪಾಯಿ ಗಳಿಸಬಹುದಾಗಿದೆ. ಪ್ರಸ್ತುತ, ಈ ಯೋಜನೆಗೆ ವಾರ್ಷಿಕ ಶೇ.6.7ರಷ್ಟು ಬಡ್ಡಿದರ ನೀಡಲಾಗುತ್ತಿದೆ. ವಿಶೇಷವೆಂದರೆ, ಈ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ಅಸಲಿಗೆ ಸೇರಿಸಲಾಗುತ್ತದೆ (ಕಾಂಪೌಂಡಿಂಗ್), ಇದರಿಂದ ನಿಮ್ಮ ಉಳಿತಾಯ ವೇಗವಾಗಿ ಬೆಳೆಯುತ್ತದೆ.
ಹೀಗಿದೆ ಲಾಭದ ಲೆಕ್ಕಾಚಾರ
ಮಾಸಿಕ ಹೂಡಿಕೆ: 3,500 ರೂಪಾಯಿ
ಒಟ್ಟು ಅವಧಿ: 5 ವರ್ಷ (60 ಕಂತುಗಳು)
ಒಟ್ಟು ಜಮೆ ಮೊತ್ತ: 2,10,000 ರೂಪಾಯಿ
ಬಡ್ಡಿ ಮೊತ್ತ: ಅಂದಾಜು 45,664 ರೂಪಾಯಿ
ಒಟ್ಟು ಸಿಗುವ ಮೊತ್ತ: 2,55,664 ರೂಪಾಯಿ
ಷೇರು ಮಾರುಕಟ್ಟೆಯ ಏರಿಳಿತಗಳಿಗೆ ಹೆದರುವ ಹೂಡಿಕೆದಾರರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಅಂಚೆ ಕಚೇರಿಯ ಯೋಜನೆಗಳಿಗೆ ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದರಿಂದ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ನಿಗದಿತ ಅವಧಿಯ ನಂತರ ಖಚಿತವಾದ ಆದಾಯ ಸಿಗುವುದು ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ.
ಅಂಚೆ ಕಚೇರಿಯ ಆರ್ಡಿ (RD) ಯೋಜನೆಯ ವಿಶೇಷತೆಯೆಂದರೆ ಇದನ್ನು ಆರಂಭಿಸುವುದು ಅತ್ಯಂತ ಸುಲಭ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ನೀವು ಖಾತೆಯನ್ನು ತೆರೆಯಬಹುದು. ಇದಕ್ಕೆ ಕೇವಲ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿ ಕೆಲವು ದಾಖಲೆಗಳನ್ನು ನೀಡಿದರೆ ಸಾಕು.
ಅವಧಿಗೂ ಮುನ್ನ ಹಣ ಹಿಂಪಡೆಯುವಿಕೆ
ಯೋಜನೆಯ ಅವಧಿ ಮುಗಿಯುವ ಮುನ್ನವೇ ಹಣದ ತುರ್ತು ಅಗತ್ಯವಿದ್ದರೆ, ಕೆಲವು ನಿಗದಿತ ಷರತ್ತುಗಳ ಅನ್ವಯ ಹಣವನ್ನು ಹಿಂಪಡೆಯುವ ಸೌಲಭ್ಯವೂ ಇಲ್ಲಿದೆ. ಅಷ್ಟೇ ಅಲ್ಲದೆ, 5 ವರ್ಷಗಳ ಅವಧಿ ಮುಗಿದ ನಂತರವೂ ಹೂಡಿಕೆದಾರರು ಬಯಸಿದರೆ ಯೋಜನೆಯನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಬಹುದು.
ಇದನ್ನೂ ಓದಿ : ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ.. ಹರಿದು ಬಂದ ಭಕ್ತ ಸಾಗರ



















