ಬೆಂಗಳೂರು : 7 ಸೀಟರ್ ಎಸ್‌ಯುವಿ ವಿಭಾಗದಲ್ಲಿ ಮಾರಾಟ ಹೆಚ್ಚಿಸಿಕೊಳ್ಳಲು ಹಲವು ಬ್ರಾಂಡ್‌ಗಳು ಈ ತಿಂಗಳು ಗ್ರಾಹಕರಿಗೆ 5 ಲಕ್ಷ ರೂ. ವರೆಗೆ ಭಾರಿ ರಿಯಾಯಿತಿ ನೀಡುತ್ತಿವೆ. ಟೊಯೋಟಾ ಫೋರ್ಚ್ಯೂನರ್ ದಶಕಗಳಿಂದ ಈ ವಿಭಾಗದಲ್ಲಿ ಅಧಿಪತ್ಯ ಸಾಧಿಸಿರುವ ನಡುವೆ, ಸ್ಕೋಡಾ ಕೊಡಿಯಾಕ್, ಜೀಪ್ ಮೆರಿಡಿಯನ್ ಮತ್ತು ಎಂಜಿ ಗ್ಲಾಸ್ಟರ್ ಬ್ರಾಂಡ್‌ಗಳು ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಮನಸೆಳೆಯುವ ಆಫರ್‌ಗಳನ್ನು ಘೋಷಿಸಿವೆ.
ಸ್ಕೋಡಾ ಕೊಡಿಯಾಕ್
ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಬ್ರಾಂಡ್‌ನ ಅತ್ಯಂತ ದುಬಾರಿ ಮತ್ತು ಫ್ಲ್ಯಾಗ್‌ಶಿಪ್ ಎಸ್‌ಯುವಿ ಎನಿಸಿಕೊಂಡಿರುವ ಕೊಡಿಯಾಕ್, ಶಕ್ತಿ, ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ವಿಶಾಲ ಜಾಗದ ಸಮತೋಲಿತ ಸಂಯೋಜನೆ ಹೊಂದಿರುವ ವಾಹನ. ಸ್ಕೋಡಾ ಕಂಪನಿ ಪ್ರಸ್ತುತ ಈ ಎಸ್‌ಯುವಿ ಮೇಲೆ ಗರಿಷ್ಠ 5 ಲಕ್ಷ ರೂ. ವರೆಗೆ ರಿಯಾಯಿತಿ ನೀಡುತ್ತಿದ್ದು, ಇದು MY25 ಮಾದರಿಗಳ ಮೇಲೆ ಅನ್ವಯವಾಗಲಿದೆ.
ಈ ರಿಯಾಯಿತಿಯಲ್ಲಿ ಆಯ್ದ ವೇರಿಯಂಟ್‌ಗಳ ಮೇಲೆ 3.5 ಲಕ್ಷ ರೂ. ಡೀಲರ್ ರಿಯಾಯಿತಿ, 1 ಲಕ್ಷ ರೂ. ವರೆಗೆ ಕಾರ್ಪೊರೇಟ್ ಅಥವಾ ಲಾಯಲ್ಟಿ ಬೆನಿಫಿಟ್ ಮತ್ತು 50,000 ರೂ. ಎಕ್ಸ್‌ಚೇಂಜ್ ಬೋನಸ್ ಸೇರಿದೆ. ಕೊಡಿಯಾಕ್ ಪ್ರಸ್ತುತ ಕೇವಲ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದ್ದು, 202 ಪಿಎಸ್ ಮತ್ತು 320 ಎನ್‌ಎಂ ಟಾರ್ಕ್ ಉತ್ಪಾದಿಸುವ 2.0-ಲೀಟರ್ ಟಿಎಸ್‌ಐ ಎಂಜಿನ್ ಹೊಂದಿದೆ. 7-ಸ್ಪೀಡ್ ಡಿಎಸ್‌ಜಿ ಟ್ರಾನ್ಸ್‌ಮಿಷನ್ ಮತ್ತು ಎಲ್ಲ ನಾಲ್ಕು ಗಾಲಿಗಳಿಗೂ ಶಕ್ತಿ ಪೂರೈಸುವ ಆಲ್-ವ್ಹೀಲ್ ಡ್ರೈವ್ ತಂತ್ರಜ್ಞಾನ ಈ ವಾಹನದ ವಿಶೇಷ. ಸ್ಕೋಡಾ ಕೊಡಿಯಾಕ್ ಎಕ್ಸ್-ಶೋರೂಂ ಬೆಲೆ 39.99 ಲಕ್ಷ ರೂ.ನಿಂದ ಆರಂಭವಾಗಿ 45.96 ಲಕ್ಷ ರೂ. ವರೆಗೆ ಇದೆ.
ಜೀಪ್ ಮೆರಿಡಿಯನ್
ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಬ್ರಾಂಡ್‌ನ ಕಡಿಮೆ ಜನಪ್ರಿಯ ವಾಹನಗಳಲ್ಲಿ ಒಂದಾದ ಮೆರಿಡಿಯನ್, ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಕಾಂಪಾಸ್ ಎಸ್‌ಯುವಿಯ ಉದ್ದಗಲದ ವಿಸ್ತೃತ ಆವೃತ್ತಿಯಾಗಿದೆ. ಕೆಲ ವರ್ಷಗಳ ಹಿಂದೆ ಮಾರುಕಟ್ಟೆಗೆ ಕಾಲಿಟ್ಟ ಈ ವಾಹನ, ಬೆಲೆ ಸೇರಿದಂತೆ ಹಲವಾರು ಕಾರಣಗಳಿಂದ ಗ್ರಾಹಕರ ಮನ ಸೆಳೆಯುವಲ್ಲಿ ವಿಫಲವಾಗಿದೆ. ಎಡಿಎಎಸ್, ಸೀಟ್ ವೆಂಟಿಲೇಷನ್, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ಮೆರಿಡಿಯನ್ ಮೇಲೆ ಪ್ರಸ್ತುತ 3.25 ಲಕ್ಷ ರೂ. ವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ 1.65 ಲಕ್ಷ ರೂ. ನೇರ ಗ್ರಾಹಕ ರಿಯಾಯಿತಿ, 1.30 ಲಕ್ಷ ರೂ. ಕಾರ್ಪೊರೇಟ್ ರಿಯಾಯಿತಿ (MY2024 ಮಾದರಿಗಳಿಗೆ ಮಾತ್ರ) ಮತ್ತು 30,000 ರೂ. ವಿಶೇಷ ಆಫರ್ ಸೇರಿದೆ. 170 ಪಿಎಸ್ ಮತ್ತು 350 ಎನ್‌ಎಂ ಟಾರ್ಕ್ ಉತ್ಪಾದಿಸುವ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಈ ವಾಹನ ಸ್ವಯಂಚಾಲಿತ ಗೇರ್‌ಬಾಕ್ಸ್ ಮತ್ತು 4×4 ಸೌಲಭ್ಯದೊಂದಿಗೆ ಲಭ್ಯವಿದೆ. ಜೀಪ್ ಮೆರಿಡಿಯನ್ ಎಕ್ಸ್-ಶೋರೂಂ ಬೆಲೆ 23.33 ಲಕ್ಷ ರೂ.ನಿಂದ ಆರಂಭವಾಗಿ 37.82 ಲಕ್ಷ ರೂ. ವರೆಗೆ ಇದೆ.
ಎಂಜಿ ಗ್ಲಾಸ್ಟರ್
ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಈ ವಿಭಾಗದಲ್ಲಿ ನಿರೀಕ್ಷಿತ ಮಾರಾಟ ಸಾಧಿಸಲು ಎಂಜಿ ಗ್ಲಾಸ್ಟರ್ ಸಹ ವಿಫಲವಾಗಿರುವ ಮತ್ತೊಂದು ವಾಹನ. ಎಂಜಿ ಕಂಪನಿ ಗ್ಲಾಸ್ಟರ್ ಎಲ್ಲ ವೇರಿಯಂಟ್‌ಗಳ ಮೇಲೆ ಗರಿಷ್ಠ 4 ಲಕ್ಷ ರೂ. ರಿಯಾಯಿತಿ ನೀಡುತ್ತಿದ್ದು, 3.5 ಲಕ್ಷ ರೂ. ನೇರ ರಿಯಾಯಿತಿ ಮತ್ತು 50,000 ರೂ. ಎಕ್ಸ್‌ಚೇಂಜ್ ಬೋನಸ್ ಸೇರಿದೆ. ಗ್ಲಾಸ್ಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಕೆಳ ವೇರಿಯಂಟ್‌ಗಳಲ್ಲಿ 158 ಬಿಹೆಚ್‌ಪಿ ಮತ್ತು 374 ಎನ್‌ಎಂ ಟಾರ್ಕ್ ಉತ್ಪಾದಿಸುವ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಉನ್ನತ ವೇರಿಯಂಟ್‌ಗಳಲ್ಲಿ ಟ್ವಿನ್-ಟರ್ಬೋಚಾರ್ಜ್ಡ್ 2.0-ಲೀಟರ್ ಡೀಸೆಲ್ ಎಂಜಿನ್ 213 ಬಿಹೆಚ್‌ಪಿ ಮತ್ತು 478 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಎಂಜಿ ಗ್ಲಾಸ್ಟರ್ ಎಕ್ಸ್-ಶೋರೂಂ ಬೆಲೆ 38.33 ಲಕ್ಷ ರೂ.ನಿಂದ 43.16 ಲಕ್ಷ ರೂ. ವರೆಗೆ ಇದೆ.
ಇದನ್ನೂ ಓದಿ : SIT ತನಿಖೆಯಲ್ಲಿ ಬಯಲಾಯ್ತು ಸಿ.ಜೆ.ರಾಯ್ ಆತ್ಮಹತ್ಯೆಗೆ ಅಸಲಿ ಕಾರಣ!



















