ಧಾರವಾಡ : ಜಿಲ್ಲೆಯಲ್ಲಿ ಎಸ್‌ಸಿ, ಎಸ್ಟಿ ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಇಬ್ಬರು ಕಾಂಗ್ರೆಸ್ಸಿಗರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ಇಂದು ಧಾರವಾಡದಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಆಯೋಜಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಪರಿಶೀಲನೆ ವೇಳೆ ಸಚಿವ ಲಾಡ್ ಹಾಗೂ ಎಂಎಲ್ಸಿ ಎಫ್.ಹೆಚ್.ಜಕ್ಕಪ್ಪನವರ ಕೂಡ ಭಾಗವಹಿಸಿದ್ದರು.

ಎಸ್ಸಿ ಎಸ್ಟಿ ಸಮಾಜದ ಪರ ದ್ವನಿ ಎತ್ತುತ್ತಿದ್ದೇನೆ ಎಂದು ಎಫ್.ಎಚ್.ಜಕ್ಕಪ್ಪನವರ ಹೇಳಿದರು. ಈ ವೇಳೆ ಸಚಿವರು ಹಾಗೂ ಎಂಎಲ್ಸಿ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಜಕ್ಕಪ್ಪನವರ ಆರೋಪಿಸಿದರು. ಸಭೆಯಲ್ಲಿ ಮಾತನಾಡಲು ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ. ವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಲಾಡ್ ತಿಳಿಸಿದರು.

ಈ ವೇಳೆ ಸಭೆಯಿಂದ ಹೊರ ನಡೆಯುವುದಾಗಿ ಜಕ್ಕಪ್ಪನವರ ಹೇಳಿದರು. ಸಭೆಯಿಂದ ಹೊರ ಹೋಗುವಂತೆ ನಾನು ಹೇಳಿಲ್ಲ, ತಮಗೆ ಹೋಗಬೇಕು ಅನಿಸಿದರೆ ಹೋಗಬಹುದು ಎಂದು ಲಾಡ್ ಹೇಳಿದರು.
ಇದನ್ನೂ ಓದಿ : ಗುಜರಾತ್‌ನಲ್ಲಿ ಪ್ರೇಮ ವಿವಾಹಕ್ಕೆ ಇನ್ನು ಪೋಷಕರ ಸಹಿ ಕಡ್ಡಾಯ?


















