ಉಡುಪಿ : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ, ಜಾತಿನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಓರ್ವ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ನಲ್ಕೆದಬೆಟ್ಟು ನಿವಾಸಿ ಸುಧೀರ್ ಬಂಗೇರ(48) ಬಂಧಿತ ಆರೋಪಿ. ‘ನಮ್ಮ ಕಾರ್ಲ’ ಎಂಬ ಪೇಸುಬುಕ್ ಖಾತೆಯಲ್ಲಿ ಕರ್ನಾಟಕ ರಾಜ್ಯ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರ ಪೋಟೊ ಹಾಕಿ ಅದರಲ್ಲಿ ‘ಆರ್‌ಎಸ್‌ಎಸ್ ಇನ್ನು ಎರಡು ವರ್ಷಗಳ ಅವಧಿ ಕೋಮುವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ’ ಎಂಬ ಪ್ರಿಯಾಂಕ ಖರ್ಗೆ ಅವರ ಹೇಳಿಕೆಯನ್ನು ಫೋಸ್ಟ್ ಮಾಡಲಾಗಿತ್ತು.
ಈ ಪೋಸ್ಟ್ ಗೆ ಸುಧೀರ್ ಬಂಗೇರ ಎಂಬಾತ ಜೂ.6ರಂದು ಕಮೆಂಟ್ ಹಾಕಿದ್ದು, ಅದರಲ್ಲಿ ಅವಹೇಳನಕಾರಿಯಾಗಿ ಓರ್ವ ದಲಿತ ಸಚಿವರ ವಿರುದ್ಧ ಕಮೆಂಟ್ ಹಾಕಿರುವುದಾಗಿ ದೂರಲಾಗಿದೆ. ಸುಧೀರ ಬಂಗೇರ ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಹಾನಿ ಮಾಡುವ ಚಟುವಟಿಕೆಯಲ್ಲಿ ತೊಡಗಿದ್ದು, ದಲಿತ ಸಚಿವರಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.
ಈ ಸಂಬಂಧ ಕಾರ್ಕಳ ನಿಟ್ಟೆಯ ಸುರೇಶ್ ಚೇತನಹಳ್ಳಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದ ಆರೋಪಿ ಸುಧೀರ ಬಂಗೇರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ : ನಂಗೂ ಬೇಕು.. ನಂಗೂ ಬೇಕು ಮಂತ್ರಿಸ್ಥಾನ – ‘ಕೈ’ ಪಾಳಯದಲ್ಲಿ ಸಚಿವಾಕಾಂಕ್ಷಿಗಳ ತೀವ್ರ ಲಾಬಿ!


















