ಗದಗ : ಗುತ್ತಿಗೆದಾರರನಿಂದ ಕಮಿಷನ್ ರೂಪದಲ್ಲಿ 5 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು. ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡ ಆಗಿದ್ದು, ಬಾಲಾಜಿ ಆಸ್ಪತ್ರೆ ಚಂದ್ರು ಲಮಾಣಿ ಅವರ ಒಡೆತನ ಆಸ್ಪತ್ರೆಯಾಗಿದೆ.

ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರು ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?
ರಸ್ತೆ ಬದಿ ತಡೆಗೋಡೆ ನಿರ್ಮಾಣ ಸಂಬಂಧ 1 ಕೋಟಿ ಮೊತ್ತದ ಕಾಮಗಾರಿಗೆ ಶಾಸಕರು ಕ್ಲಾಸ್-1 ಗುತ್ತಿಗೆದಾರ (Contractor) ವಿಜಯ ಪೂಜಾರ್ ಎನ್ನುವವರ ಬಳಿ 11 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಇದರ ಮೊದಲ ಹಂತದ ಹಣವಾಗಿ 5 ಲಕ್ಷ ರೂ. ಪಡೆಯುವಾಗಲೇ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಶಾಸಕರು ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಶಾಸಕ ಚಂದ್ರು ಲಮಾಣಿ ಸೇರಿ ಮೂವರನ್ನ ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಅಪ್ಪನ ಹೆಸರಿಂದ ಅಸ್ತಿತ್ವ ಉಳಿಸಿಕೊಂಡ ನೀವು ನಂಗೆ ಪಾಠ ಮಾಡ್ಬೇಡಿ | ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ಗರಂ



















