ಬೆಂಗಳೂರು | ಪಿಎಸ್‌ಐ ಸಮವಸ್ತ್ರದಲ್ಲಿ ಬಂದು ಮನೆ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿ ಗುರುತು ಪತ್ತೆ ಮಾಡಿದ್ದಾರೆ. ಬ್ಯಾಡರಹಳ್ಳಿ ಬಿಇಎಲ್ ಲೇಔಟ್‌ನಲ್ಲಿನ ಹೊಂಬಾಳೆಗೌಡ ಎಂಬುವರ ಮನೆಯಲ್ಲಿ ಈ ದರೋಡೆ ನಡೆದಿತ್ತು. ಪೊಲೀಸರ ವೇಷದಲ್ಲಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ಹೊಂಬಾಳೆಗೌಡ ಹಾಗೂ ಅವರ ಪತ್ನಿಯ ಕೈ, ಕಾಲುಗಳಿಗೆ ಟೇಪ್ ಸುತ್ತಿ ಪಿಸ್ತೂಲ್ ತೋರಿಸಿ 20 ಲಕ್ಷ ರೂ. ನಗದು, ಅರ್ಧ ಕೆಜಿ ಚಿನ್ನ ದೋಚಿ ಪರಾರಿಯಾಗಿದ್ದರು.
ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿ ಯಾರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ ನಿಂದ ಪೊಲೀಸರಿಗೆ ಈಗ ಮಹತ್ವದ ಸುಳಿವು ಸಿಕ್ಕಿದೆ. ಸುಳಿವು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಏಕೆಂದರೆ ಎವಿಡೆನ್ಸ್‌ನಲ್ಲಿ ಸಿಕ್ಕಿರುವ ಗುರುತು ಜೈಲಿನಲ್ಲಿರುವ ವ್ಯಕ್ತಿಯದ್ದು ಎನ್ನಲಾಗಿದೆ. ಹೀಗಾಗಿ ಆ ಕೈದಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಯು ಪೆರೋಲ್ ಮೇಲೆ ಹೊರಗೆ ಬಂದಿದ್ದು, ಪುನಃ ಜೈಲಿಗೆ ಸೇರಿರುವ ಮಾಹಿತಿ ಇದೆ. ರಾಬರಿ ಆದ ಮಾರನೇ ದಿನವೇ ಖದೀಮ, ಜೈಲು ಸೇರಿದ್ದಾನೆ.
ರಾಬರಿ ಮಾಡಿ ತನ್ನ ಆಪ್ತರಿಗೆ ಹಣ, ಒಡವೆ ಕೊಟ್ಟು ಆರೋಪಿ ಮತ್ತೆ ಜೈಲು ಸೇರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜೈಲಿನಲ್ಲಿ ಇರುವ ಕೈದಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಮನೆಯಲ್ಲಿ ಇರುವ ಹಣ ಖದೀಮರಿಗೆ ಹೇಗೆ ಗೊತ್ತಾಯಿತು? ಅನ್ನೋ ಅನುಮಾನ ಕೂಡ ಈಗ ಪೊಲೀಸರನ್ನು ಕಾಡುತ್ತಿದೆ.
ಹೀಗಾಗಿ ಕುಟುಂಬಸ್ಥರ ಮೇಲೆಯೂ ಪೊಲೀಸರಿಗೆ ಅನುಮಾನ ಹುಟ್ಟಿಕೊಂಡಿದೆ. ಹೊಂಬಾಳೆಗೌಡ ಜಮೀನು ಮಾರಾಟ ಮಾಡಿದ್ದ ಒಂದೂವರೆ ಕೋಟಿ ಹಣವನ್ನು ಮನೆಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಮನೆಯಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಹಣ ಇತ್ತು. ಆದರೆ ಅದರಲ್ಲಿ 20 ಲಕ್ಷ ರೂ. ಹಣ ಹಾಗೂ ಅರ್ಧ ಕೆಜಿ ಚಿನ್ನವನ್ನು ಖದೀಮರು ದೋಚಿದ್ದಾರೆ.
ಇದನ್ನೂ ಓದಿ : ಎಟಿಎಂಗೆ ಹಾಕಬೇಕಿದ್ದ ಕೋಟಿ ಕೋಟಿ ಹಣ ಲೂಟಿ!


















