ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ರಾಜ್ಯಾಧ್ಯಕ್ಷರಾಗಿ ಬಿ. ವೈ ವಿಜಯೇಂದ್ರ ಅಧಿಕಾರ ಸ್ವೀಕರಿಸಿದ ಬಳಿಕ ನಡೆಯುತ್ತಿರುವ ಎರಡನೇ ಕಾರ್ಯಕಾರಿಣಿ ಸಭೆಯಾಗಿರುವುದರಿಂದ ರಾಜಕೀಯವಾಗಿ ಮಹತ್ವ ಪಡೆದಿದೆ.
ಸಭೆಯನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟಿಸಲಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವವಹಿಸಲಿದ್ದಾರೆ. ಸಭೆ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ವಿರುದ್ಧ ನಿರ್ಣಯ ಮಂಡನೆ ಮಾಡುವ ಸಾಧ್ಯತೆ ಇದೆ. ವಿಪಕ್ಷ ನಾಯಕ ಆರ್ ಅಶೋಕ್ ನಿರ್ಣಯ ಮಂಡಿಸಲಿದ್ದಾರೆ. ಮುಂದಿನ ಜಿಬಿಎ ಹಾಗೂ ಸ್ಥಳೀಯ ಚುನಾವಣೆಯ ಸಿದ್ಧತೆ, ರಾಜ್ಯ ಸರ್ಕಾರ ವಿರುದ್ಧ ಹೋರಾಟದ ರೂಪರೇಷೆ ಮತ್ತು ಪಕ್ಷ ಸಂಘಟನೆ ಬಲಪಡಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಎರಡನೇ ಹಂತದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ಜೊತೆಗಿನ ಮೈತ್ರಿ ವಿಚಾರವಾಗಿ ಚರ್ಚೆ ಸಾಧ್ಯತೆ ಇದೆ. ಮೈತ್ರಿ ನಾಯಕರ ನಡುವಿನ ಗೊಂದಲಗಳ ಬಗ್ಗೆ ಸಹ ಮಾತುಕತೆ ನಡೆಯಲಿದೆ. ಮೂರನೇ ಹಂತದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಿ.ಎಲ್. ಸಂತೋಷ ಪಕ್ಷ ಸಂಘಟನೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್, ರಾಜ್ಯ ಸಹ ಉಸ್ತುವಾರಿ ಪಿ. ಸುಧಾಕರ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಡಿ.ವಿ ಸಧಾನಂದ ಗೌಡ, ಬಸವರಾಜ್‌ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಕೋರ್ ಕಮಿಟಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ರಾಜಕೀಯದ ದೃಷ್ಟಿಯಿಂದ ಮಹತ್ವ ಪಡೆದಿರುವ ಈ ಸಭೆಯಲ್ಲಿ ಮುಂದಿನ ಚುನಾವಣಾ ತಂತ್ರ ಹಾಗೂ ಸರ್ಕಾರ ವಿರುದ್ಧದ ಹೋರಾಟದ ದಿಕ್ಕು ಸ್ಪಷ್ಟವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಸೂರಜ್ ರೇವಣ್ಣಗೂ ಶುರುವಾದ ‘ಲೈಂಕ ದೌರ್ಜ’



















