ಬೆಂಗಳೂರು | ಬೀದಿ ನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಉತ್ತರ ನಗರ ಪಾಲಿಕೆಯ ಪಶುಪಾಲನಾ ಇಲಾಖೆಯಿಂದ 461 ಬೀದಿ ನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಸಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಮೇಡಿ ಅಗ್ರಹಾರದ ಪ್ರಾಣಿ ಸಂತಾನ ನಿಯಂತ್ರಣ ಕೇಂದ್ರದಲ್ಲಿ (ABC) ಬೀದಿ ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ಸರ್ಕಾರದ ಮಾರ್ಗಸೂಚಿಗಳು ಹಾಗೂ ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದ ನಿಯಮಾವಳಿಗಳ ಪ್ರಕಾರ ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕ ವಿಧಾನದಲ್ಲಿ ನಡೆಸಲಾಗುತ್ತಿದೆ ಎಂದು ಉತ್ತರ ನಗರಪಾಲಿಕೆ ಆಯುಕ್ತ ಪೊಮ್ಮಲ್ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ನಂತರ ವೈದ್ಯಕೀಯ ಅಗತ್ಯದಂತೆ ತೆಗೆದುಹಾಕಲಾಗುವ ಅಂಗಾಂಗಗಳನ್ನು ಬಯೋ-ಮೆಡಿಕಲ್ ತ್ಯಾಜ್ಯ ನಿರ್ವಹಣಾ ನಿಯಮಾವಳಿಗಳು ಮತ್ತು ಸಾರ್ವಜನಿಕ ಆರೋಗ್ಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನಿಗದಿತ ವೈಜ್ಞಾನಿಕ ವಿಧಾನಗಳ ಮೂಲಕ ಸಮರ್ಪಕವಾಗಿ ನಾಶ ಮಾಡಲಾಗಿದೆ.
ಈ ನಾಶೀಕರಣ ಪ್ರಕ್ರಿಯೆಯನ್ನು ಪಾಲಿಕೆಯಿಂದ ರಚಿಸಲಾದ ಸಮಿತಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು. ಈ ಸಮಿತಿಯಲ್ಲಿ ಪಾಲಿಕೆಯ ಮುಖ್ಯ ಪಶು ವೈದ್ಯಾಧಿಕಾರಿಗಳು, ಪಶುಪಾಲನಾ ಇಲಾಖೆಯ ಸ್ಥಳೀಯ ಪಶುವೈದ್ಯರು, SPCA ನಾಮನಿರ್ದೇಶಿತ ಸದಸ್ಯರು ಹಾಗೂ ಸ್ವಯಂಸೇವಾ ಸಂಸ್ಥೆಯ (NGO) ಪ್ರತಿನಿಧಿಗಳು ಒಳಗೊಂಡಿದ್ದಾರೆ.
ಇನ್ನೂ ಉತ್ತರ ನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು. ಪ್ರಮುಖವಾಗಿ ಶಾಲ ಮಕ್ಕಳು ಹಾಗೂ ವೃದ್ಧರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದವು.ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ರಸ್ತೆಯಲ್ಲಿ ಒಡಾಟಕ್ಕು ತೊಂದರೆ ಉಂಟಾಗಿತ್ತು ಅಂತ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇನ್ನೂ ಜನವರಿ 2026ರ ಅವಧಿಯಲ್ಲಿ ಒಟ್ಟು 461 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದರಲ್ಲಿ 190 ಗಂಡು ನಾಯಿಗಳು ಹಾಗೂ 271 ಹೆಣ್ಣು ನಾಯಿಗಳು ಸೇರಿವೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಪಶುಪಾಲನಾ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ಹೆಚ್.ಕೆ. ಗಂಗಾಧರಯ್ಯ, ಡಾ. ಎಸ್.ಪಿ. ಲೋಕೇಶ್, ಡಾ. ಆರ್. ಮನೋಹರ್, ಸ್ಥಳೀಯ ಪಶುವೈದ್ಯಾಧಿಕಾರಿಗಳಾದ ಡಾ. ಕೆ.ಎಸ್. ಶ್ವೇತ ಹಾಗೂ SPCA ನಾಮನಿರ್ದೇಶಿತ ಸದಸ್ಯರಾದ ನಿರ್ಮಲಾ ಜೀತ್ ಕೌರ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಮೈಸೂರು | ಜಾತ್ರೆಯಲ್ಲಿ ಬಂಡಿ ಓಡಿಸುವಾಗ ಬಿದ್ದು ಯುವಕ ಸಾ*ವು



















