ಉಡುಪಿ | ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನ ನೌಕರರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆಯನ್ನು ಚುರುಕುಗೊಳಿಸಿದ್ದ ಪೊಲೀಸರು, ಕೇರಳ ರಾಜ್ಯದಲ್ಲಿ ಮತ್ತೋರ್ವ ಆರೋಪಿಯಾದ ಅಲ್ಲಿಫ್ ಇಸ್ಲಾಂ (21) ನನ್ನ ಬಂಧಿಸಿದ್ದಾರೆ.
ಈ ಹಿಂದೆ 2025ರ ಡಿ.21ರಂದು ಗುಜರಾತ್ ರಾಜ್ಯದ ಹೀರೇಂದ್ರ ಕುಮಾರ್ (34) ಹಾಗೂ 2025ರ ನ.21ರಂದು ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬುವರನ್ನು ಬಂಧಿಸಲಾಗಿತ್ತು.
ಇವರೆಲ್ಲ ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿ ಯನ್ನು ವಾಟ್ಸಾಪ್ ಹಾಗೂ ಫೇಸ್ ಬುಕ್ ಮೂಲಕ ಪಾಕಿಸ್ತಾನಕ್ಕೆ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದ ತನಿಖೆ ಮಂದುವರಿಸಿದ ಪೊಲೀಸರು, 4ನೇ ಆರೋಪಿ ಆಲಿಫ್ ಇಸ್ಲಾಮ್‌ನನ್ನು ಫೆ.16ರಂದು ಬಂಧಿಸಿದ್ದಾರೆ.
ಇನ್ನು, ಬಂಧಿತ ಆರೋಪಿ ಆಲಿಫ್ ಇಸ್ಲಾಮ್ ಬಾಂಗ್ಲಾದೇಶದ ಪ್ರಜೆ ಎಂಬ ಅನುಮಾನ ಇದ್ದು, ಈ ವಿಚಾರ ದೃಢಪಟ್ಟ ನಂತರ ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ : ಡ್ರಗ್ ಪೆಡ್ಲಿಂಗ್ | ವಿದೇಶಿ ಫುಟ್ಬಾಲ್ ಆಟಗಾರ ಬೆಂಗಳೂರಲ್ಲಿ ಬಂಧನ..!



















