ಬೆಂಗಳೂರು : ತನ್ನ ದೊಡ್ಡಮ್ಮ ಮನೆಗೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಯಾರಿಗೂ ತಿಳಿಯದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ಸಹೋದರಿ ಮಗನನ್ನ ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ನಿವಾಸಿ ಶರತ್ (31) ಬಂಧಿತ ಆರೋಪಿ.
ಈತನಿಂದ 36 ಲಕ್ಷ ಮೌಲ್ಯದ 241 ಗ್ರಾಂ ಚಿನ್ನ, 2.8 ಕೆ.ಜಿ ಬೆಳ್ಳಿ 1.30 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ತ್ಯಾಗರಾಜನಗರದ ಮನೆಯೊಂದರಲ್ಲಿ ಕಳೆದ ವರ್ಷ ಆಗಸ್ಟ್ನಲ್ಲಿ ನಡೆದಿತ್ತು. ಕೃತ್ಯ ಸಂಬಂಧ ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬಂಧಿಸಲಾಗಿದೆ.
ಮನೆ ಮಾಲಕಿಯು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಈಕೆಯ ಮಗಳು ಹೈದರಾಬಾದ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿಳು. ಕಳೆದ 25 ವರ್ಷಗಳಿಂದಲೂ ದೂರುದಾರರ ಮನೆಯಲ್ಲಿ ಆರೋಪಿಯ ದೊಡ್ಡಮ್ಮ ಮನೆ ಕೆಲಸ ಮಾಡುತ್ತಿದ್ದರು. ನಂಬಿಕೆಯಿಂದ ಮನೆಯ ಮತ್ತೊಂದು ಬೀಗದ ಕೀಯನ್ನ ಮನೆಕೆಲಸದಾಕೆಗೆ ನೀಡಿದ್ದರು.
ದೊಡ್ಡಮ್ಮಗೆ ಊಟ ನೀಡಲು ಶರತ್ ಆಗಾಗ ಮಾಲೀಕರ ಮನೆಗೆ ಬರುತ್ತಿದ್ದ. ಈ ವೇಳೆ, ಮನೆ ಮಾಲೀಕರು ಇಲ್ಲದಿರುವುದನ್ನ ಗ್ರಹಿಸಿದ್ದ. ಆ ಬಳಿಕ ಕಳ್ಳತನ ಮಾಡಲು ಸಂಚು ರೂಪಿಸಿ ದೊಡ್ಡಮ್ಮಗೆ ತಿಳಿಯದಂತೆ ಆಕೆ ಬಳಿಯಿದ್ದ ಬೀಗದ ಕೀ ಪಡೆದು ಕಳೆದ ವರ್ಷ ಅಕ್ಟೋಬರ್ 22ರಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ.
ಅನುಮಾನದ ಮೇರೆಗೆ ಮನೆಗೆಲಸದಾಕೆಯನ್ನ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದರೂ ಖದೀಮ ಪತ್ತೆಯಾಗಿರಲಿಲ್ಲ. ಮತ್ತೊಮ್ಮೆ ಮನೆಗೆಲಸದಾಕೆ ಮನೆಯಲ್ಲಿದ್ದ ಆರೋಪಿಯನ್ನ ತೀವ್ರವಾಗಿ ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದನ್ನ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಬಾಲಕನ ಮೇಲೆ ಚಿರತೆ ದಾಳಿ!



















