ಹೈದರಾಬಾದ್: ಟಾಲಿವುಡ್‌ನ ಸ್ಟಾರ್ ಜೋಡಿ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲ ಅವರ ಮನೆಗೆ ಈಗ ಹೊಸ ಅತಿಥಿಗಳ ಆಗಮನವಾಗಿದೆ. ಈ ದಂಪತಿಗೆ ಇಂದು ಅವಳಿ ಮಕ್ಕಳು (ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಮಗು) ಜನಿಸಿದ್ದು, ಮೆಗಾ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಈ ಶುಭ ಸಂದೇಶವನ್ನು ರಾಮ್ ಚರಣ್ ಅವರ ತಂದೆ, ಮೆಗಾಸ್ಟಾರ್ ಚಿರಂಜೀವಿ ಅವರೇ ಸ್ವತಃ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಾಯಿ ಮತ್ತು ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡ ಚಿರಂಜೀವಿ
ಟ್ವೀಟ್ ಮೂಲಕ ಈ ವಿಚಾರವನ್ನು ಹಂಚಿಕೊಂಡಿರುವ ಚಿರಂಜೀವಿ ಅವರು, “ತುಂಬಾ ಸಂತೋಷ ಮತ್ತು ಕೃತಜ್ಞತೆಯಿಂದ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ ಅವಳಿ ಮಕ್ಕಳಾಗಿವೆ. ಮೊಮ್ಮಕ್ಕಳನ್ನು ಬರಮಾಡಿಕೊಳ್ಳುತ್ತಿರುವುದು ನಮಗೆ ದೈವಿಕ ಆಶೀರ್ವಾದದಂತೆ ಭಾಸವಾಗುತ್ತಿದೆ. ನಮ್ಮ ಕುಟುಂಬದ ಮೇಲೆ ಪ್ರೀತಿ ಹರಿಸಿದ ಎಲ್ಲರಿಗೂ ಧನ್ಯವಾದಗಳು,” ಎಂದು ಬರೆದುಕೊಂಡಿದ್ದಾರೆ. ಉಪಾಸನಾ ಅವರು 2025ರ ಅಕ್ಟೋಬರ್‌ನಲ್ಲಿ ತಮ್ಮ ಎರಡನೇ ಗರ್ಭಧಾರಣೆಯ ಸುದ್ದಿಯನ್ನು ಘೋಷಿಸಿದ್ದರು.
ದಶಕದ ಪ್ರೀತಿಯ ಪಯಣ
ರಾಮ್ ಚರಣ್ ಮತ್ತು ಅಪೊಲೊ ಚಾರಿಟಿಯ ಉಪಾಧ್ಯಕ್ಷೆ ಉಪಾಸನಾ 2012ರ ಜೂನ್‌ನಲ್ಲಿ ವಿವಾಹವಾಗಿದ್ದರು. ಮದುವೆಯಾದ ಹತ್ತು ವರ್ಷಗಳ ನಂತರ ಅಂದರೆ 2023ರಲ್ಲಿ ಇವರಿಗೆ ಮೊದಲ ಪುತ್ರಿ ‘ಕ್ಲಿನ್ ಕಾರಾ’ ಜನಿಸಿದ್ದಳು. ಇದೀಗ ಅವಳಿ ಮಕ್ಕಳ ಆಗಮನದೊಂದಿಗೆ ಇಡೀ ಕುಟುಂಬದ ಸಡಗರ ಇಮ್ಮಡಿಯಾಗಿದೆ. ಉಪಾಸನಾ ಅವರು ಅಪೊಲೊ ಆಸ್ಪತ್ರೆಗಳ ಸಂಸ್ಥಾಪಕ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳಾಗಿದ್ದು, ಇತ್ತ ರಾಮ್ ಚರಣ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಈ ದಂಪತಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇದನ್ನೂ ಓದಿ: ಬಜೆಟ್ ದಿನವೇ ಆಭರಣ ಪ್ರಿಯರಿಗೆ ಸಿಹಿ ಸುದ್ದಿ | ಚಿನ್ನ-ಬೆಳ್ಳಿ ದರ ಇಳಿಕೆ



















