ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಶುಕ್ರವಾರ (ಜನವರಿ 30, 2026) ರಾತ್ರೋರಾತ್ರಿ ದಿಢೀರ್ ನಾಪತ್ತೆಯಾಗಿ, ಕೆಲ ಗಂಟೆಗಳ ಬಳಿಕ ಮತ್ತೆ ಪ್ರತ್ಯಕ್ಷವಾಗಿರುವ ನಾಟಕೀಯ ಘಟನೆ ನಡೆದಿದೆ.
ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋಯರ್ಸ್ಗಳನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ಒಬ್ಬರಾದ ಕೊಹ್ಲಿ ಅವರ ಖಾತೆ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದ ಕಣ್ಮರೆಯಾಗಿದ್ದು ಜಾಗತಿಕ ಮಟ್ಟದಲ್ಲಿ ಅವರ ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿತ್ತು.

ಸುಮಾರು 270 ದಶಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಕೊಹ್ಲಿ ಅವರ ಖಾತೆ, ಶುಕ್ರವಾರ ಮುಂಜಾನೆ ವೇಳೆ ಹಠಾತ್ ಆಗಿ ನಿಷ್ಕ್ರಿಯಗೊಂಡಂತೆ ಕಂಡುಬಂದಿತ್ತು. ಇದು ಹ್ಯಾಕರ್ಗಳ ಕೆಲಸವೋ ಅಥವಾ ತಾಂತ್ರಿಕ ದೋಷವೋ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ, ಬೆಳಗ್ಗೆ ಸುಮಾರು 8. 30ರ ಹೊತ್ತಿಗೆ ಖಾತೆ ಮತ್ತೆ ಸಕ್ರಿಯಗೊಂಡಿದೆ. ಕುತೂಹಲಕಾರಿ ಸಂಗತಿಯೆಂದರೆ, ವಿರಾಟ್ ಅವರ ಖಾತೆ ನಾಪತ್ತೆಯಾದ ಸಮಯದಲ್ಲೇ ಅವರ ಸಹೋದರ ವಿಕಾಸ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆ ಕೂಡ ಡಿ-ಆಕ್ಟಿವೇಟ್ ಆಗಿತ್ತು. ವಿರಾಟ್ ಖಾತೆ ಮರಳಿದ್ದರೂ, ವಿಕಾಸ್ ಅವರ ಖಾತೆ ಇನ್ನೂ ನಿಷ್ಕ್ರಿಯವಾಗಿಯೇ ಉಳಿದಿದೆ. ಈ ಹಠಾತ್ ಬೆಳವಣಿಗೆಗೆ ಕಾರಣವೇನು ಎಂಬ ಬಗ್ಗೆ ಕೊಹ್ಲಿ ಅವರ ತಂಡವಾಗಲಿ ಅಥವಾ ಇನ್‌ಸ್ಟಾಗ್ರಾಮ್ ಸಂಸ್ಥೆಯಾಗಲಿ ಈವರೆಗೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಕೋಲಾಹಲ ಸೃಷ್ಟಿ
ಈ “ಡಿಜಿಟಲ್ ಕಣ್ಮರೆ” ಅಭಿಮಾನಿಗಳ ವಲಯದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ಕೊಹ್ಲಿ ಅವರ ಪ್ರೊಫೈಲ್ ಸಿಗದಿರುವುದನ್ನು ಗಮನಿಸಿದ ಅಭಿಮಾನಿಗಳು, ತಕ್ಷಣವೇ ಪ್ರತಿಕ್ರಿಯಿಸಲು ಆರಂಭಿಸಿದರು. ಕೆಲವರು ಆತಂಕಗೊಂಡರೆ, ಇನ್ನು ಕೆಲವರು ನೇರವಾಗಿ ವಿರಾಟ್ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಖಾತೆಗೂ ಲಗ್ಗೆ ಇಟ್ಟರು. ಅನುಷ್ಕಾ ಅವರ ಪೋಸ್ಟ್‌ಗಳ ಕಾಮೆಂಟ್ ವಿಭಾಗದಲ್ಲಿ, “ಅತ್ತಿಗೆ, ಅಣ್ಣನ ಅಕೌಂಟ್ ಎಲ್ಲಿ ಹೋಯಿತು? (ಭಾಭಿ, ಭಯ್ಯಾ ಕಾ ಅಕೌಂಟ್ ಕಹಾ ಗಯಾ?)” ಎಂದು ಪ್ರಶ್ನಿಸುವ ಮೂಲಕ ತಮ್ಮ ಕಾಳಜಿಯನ್ನು ಹೊರಹಾಕಿದರು. ಅಭಿಮಾನಿಗಳ ಈ ನಡೆ ಪರಿಸ್ಥಿತಿಯ ಗಂಭೀರತೆ ಮತ್ತು ವಿರಾಟ್ ಮೇಲಿನ ಅವರ ಅಭಿಮಾನದ ಪರಿಯನ್ನು ತೋರಿಸುತ್ತಿತ್ತು.
ಇನ್ನು ಕೆಲ ನೆಟ್ಟಿಗರು ಈ ಸನ್ನಿವೇಶವನ್ನು ಹಾಸ್ಯಮಯವಾಗಿಯೂ ಸ್ವೀಕರಿಸಿದರು. ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದ “ಮಿಸ್ಸಿಂಗ್ ಪೆಂಗ್ವಿನ್” (ಕಣ್ಮರೆಯಾದ ಪೆಂಗ್ವಿನ್) ಟ್ರೆಂಡ್‌ಗೆ ಕೊಹ್ಲಿ ಅವರ ಖಾತೆ ನಾಪತ್ತೆಯಾದ ಘಟನೆಯನ್ನು ತಳುಕು ಹಾಕಲಾಯಿತು. 2026ನೇ ಇಸವಿಯಲ್ಲಿ ಎಲ್ಲವೂ ವಿಚಿತ್ರವಾಗಿ ಮಾಯವಾಗುತ್ತಿವೆ, ಪೆಂಗ್ವಿನ್ ನಂತರ ಈಗ ಕೊಹ್ಲಿ ಕೂಡ ಯಾರಿಗೂ ಹೇಳದೆ ಇಂಟರ್ನೆಟ್‌ನಿಂದ ವಾಕ್ ಔಟ್ ಮಾಡಿದ್ದಾರೆ ಎಂಬ ತಮಾಷೆಯ ಮೀಮ್‌ಗಳು ಹರಿದಾಡಿದವು. ಸದ್ಯ ವಿರಾಟ್ ಕೊಹ್ಲಿ ಅವರ ಖಾತೆ ಯಥಾಸ್ಥಿತಿಗೆ ಮರಳಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ. ಆದರೂ, ಈ ಅಲ್ಪಾವಧಿಯ ಕಣ್ಮರೆಗೆ ನಿಖರ ಕಾರಣವೇನು ಎಂಬ ಪ್ರಶ್ನೆ ಮಾತ್ರ ಇನ್ನೂ ಉತ್ತರ ಸಿಗದೆ ಉಳಿದಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ಗೂ ಮುನ್ನ ಎದುರಾಳಿಗಳಿಗೆ ಎಚ್ಚರಿಕೆ ರವಾನಿಸಿದ ಕ್ವಿಂಟನ್ ಡಿ ಕಾಕ್ | ಹರಿಣಗಳ ನಾಡಿನ ನೂತನ ರನ್ ಸರದಾರ



















