ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ನಗರಪಾಲಿಕೆಯ ಕರಡು ಮತದಾರರ ಪಟ್ಟಿ ಇಂದು ರಾಜ್ಯ ಚುನಾವಣೆ ಆಯೋಗ ಜಿಬಿಎ ಕೇಂದ್ರ ಕಛೇರಿಯಲ್ಲಿ ಬಿಡುಗಡೆ ಮಾಡಿ, ಈ ಬಾರಿ ಜಿಬಿಎ (GBA) ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಮತದಾನಕ್ಕೆ ಅವಕಾಶ ನೀಡಲು ಮುಂದಾಗಿದೆ ಎಂದು ರಾಜ್ಯ ಚುನಾವಣೆ ಅಯೋಗದ ಅಯುಕ್ತ ಸಿಂಗ್ರಿಶ್ ತಿಳಿಸಿದರು.
ಆಕ್ಷೇಪಣೆ ಸಲ್ಲಿಸಲು ಜನವರಿ 20 ರಿಂದ ಫೆಬ್ರವರಿ 3, 2026 ರವರೆಗೆ ಅವಕಾಶ ನೀಡಲಾಯಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 88,91,411 ಮತದಾರರು ಬರಲಿದ್ದಾರೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.
ಇನ್ನೂ ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಇಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಸೇರಿದಂತೆ ಒಟ್ಟು 05 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡ್‌ಗಳು ರಚನೆಯಾಗಿವೆ.
ಜಿಬಿಎ ಚುನಾವಣೆಗೆ 1 ಅಕ್ಟೋಬರ್ 2025 ನ್ನು ಆಧಾರವಾಗಿ ತೆಗೆದುಕೊಂಡು ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 45,69,193 ಪುರುಷರು, 43,20,583 ಮಹಿಳೆಯರು ಹಾಗೂ 1,635 ಇತರೆ ಮತದಾರರು* ಸೇರಿದಂತೆ, ಒಟ್ಟು 88,91,411 ಮತದಾರರು ಇದ್ದಾರೆ ಎಂದು ವಿವರಿಸಿದರು.
ಜನವರಿ 20, 2026 ರಿಂದ ಫೆಬ್ರವರಿ 3, 2026 ರವರೆಗೆ ಬೂತ್ ಲೆವಲ್ ಅಧಿಕಾರಿಗಳು (ಬಿ.ಎಲ್.ಓ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಮಾರ್ಚ್ 16, 2026 ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 23ರಲ್ಲಿ ಅತಿ ಹೆಚ್ಚು 49,530 ಮತದಾರರು ಇದ್ದರೆ, ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 16ರಲ್ಲಿ ಅತಿ ಕಡಿಮೆ 10,926 ಮತದಾರರು ಇದ್ದಾರೆ. ಒಟ್ಟು 369 ವಾರ್ಡ್‌ಗಳಲ್ಲಿ 8,044 ಮತಗಟ್ಟೆಗಳು ಇರಲಿವೆ ಎಂದು ಮಾಹಿತಿ ನೀಡಿದರು.
ವಾರ್ಡ್‌ವಾರು ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣ https://gba.karnataka.gov.in/home ನಲ್ಲಿ ಪಿಡಿಎಫ್ ಆವೃತ್ತಿಯಾಗಿ ಪ್ರಕಟಿಸಲಾಗುವುದು. ಸಾರ್ವಜನಿಕರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನು ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳುವಂತೆ ಕೋರಲಾಗಿದೆ. ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಯಾದ ಸೆಲ್ವಮಣಿ, ನಗರ ಪಾಲಿಕೆ ಆಯುಕ್ತರಾರ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ಡಾ. ರಾಜೇಂದ್ರ ಕೆ.ವಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಕರೂರು ಕಾಲ್ತುಳಿತ ಪ್ರಕರಣ | 2ನೇ ಬಾರಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್!



















