ಉಡುಪಿ : ಅಖಿಲ ಭಾರತ ಹುಲಿ ಗಣತಿ ಇಂದಿನಿಂದ (ಜ. 5) ಆರಂಭವಾಗಿರುವ ಹಿನ್ನೆಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಚಾರಣ ಪಥಗಳು ಮತ್ತು ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಈ ಆದೇಶ ಹೊರಡಿಸಿದ್ದು, ಜ.5ರಿಂದ 12ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ. ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ (ಎನ್‌ಟಿಸಿಎ) ಮತ್ತು ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮಾರ್ಗಸೂಚಿಯಂತೆ ದೇಶದಾದ್ಯಂತ ಮೊದಲ ಹಂತದ ಹುಲಿ ಗಣತಿ ಇಂದಿನಿಂದ ಪ್ರಾರಂಭವಾಗಿದ್ದು,ರಾಜ್ಯದ ಅರಣ್ಯ ಇಲಾಖೆಯೂ 2026ನೇ ಸಾಲಿನ ಗಣತಿಗೆ ಚಾಲನೆ ನೀಡಿದೆ.
ಕುದುರೆಮುಖ-ಕಾರ್ಕಳ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯು ಕೊಡಚಾದ್ರಿ, ಸಿದ್ದಾಪುರ, ಆಗುಂಬೆ, ಕಾರ್ಕಳ, ಬೆಳ್ತಂಗಡಿವರೆಗೂ ವ್ಯಾಪಿಸಿದೆ. ಕಳೆದ ಗಣತಿಯಲ್ಲಿ ಈ ಭಾಗದಲ್ಲಿ 4 ಹುಲಿಗಳನ್ನು ಗುರುತಿಸಲಾಗಿತ್ತು. ಕರಾವಳಿ ಭಾಗದಲ್ಲಿ ಮೂಕಾಂಬಿಕಾ ವನ್ಯಜೀವಿ ವಲಯ, ಸೋಮೇಶ್ವರ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನಗಳು ವನ್ಯಜೀವಿಗಳ ಪ್ರಮುಖ ಆಶ್ರಯ ತಾಣಗಳಾಗಿವೆ.
ಗಣತಿ ಕಾರ್ಯ ಅಡೆತಡೆಯಿಲ್ಲದೆ ಸಾಗುವ ಉದ್ದೇಶದಿಂದ ಆಗುಂಬೆ, ಕೊಡಚಾದ್ರಿ, ಕಾರ್ಕಳ, ಹೆಬ್ರಿ, ಬೆಳ್ತಂಗಡಿಯ ಪ್ರಮುಖ ಪ್ರವಾಸಿ ತಾಣಗಳಾದ ಗಂಗಡಿಕಲ್ಲು, ಕುದುರೆಮುಖ ಪೀಕ್, ನೇತ್ರಾವತಿ ಪೀಕ್, ಕುರಿಂಜಾಲ್, ವಾಲಿ ಕುಂಜ, ಕೊಡಚಾದ್ರಿ, ಬಂಡಾಜೆ, ನರಸಿಂಹ ಪರ್ವತಗಳಿಗೆ ಚಾರಣ ಮತ್ತು ಹನುಮಾನ್ ಗುಂಡಿ, ಸೂತನಬ್ಬಿ, ಕಡಂಬಿ, ಬಂಡಾಜೆ, ಕೂಡ್ಲು ತೀರ್ಥ, ಜೋಮ್ಲು ತೀರ್ಥ, ಹಿಡ್ಲುಮನೆ ಜಲಪಾತಗಳ ವೀಕ್ಷಣೆ ಮತ್ತು ಅರಣ್ಯ ಸಫಾರಿಯನ್ನು ಜ. 5ರಿಂದ 12ರ ವರೆಗೆ ನಿಷೇಧಿಸಲಾಗಿದೆ.
ಇದನ್ನೂ ಓದಿ : ದೇವರಾಯನದುರ್ಗ ಅರಣ್ಯದಲ್ಲಿ 11 ಮಂಗಗಳ ನಿಗೂಢ ಸಾವು | ಸಾರ್ವಜನಿಕರಲ್ಲಿ ಆತಂಕ



















