ಖಾರ್ಗೋನ್ (ಮಧ್ಯಪ್ರದೇಶ) | ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ವಿಷ ಆಹಾರ ಸೇವಿಸಿ ಕನಿಷ್ಠ 200 ಗಿಳಿಗಳು ಸಾವನ್ನಪ್ಪಿವೆ.
ಬದ್ವಾ ಪ್ರದೇಶದ ನದಿ ದಂಡೆಯಲ್ಲಿರುವ ಸೇತುವೆಯ ಬಳಿ ಕಳೆದ ನಾಲ್ಕು ದಿನಗಳಲ್ಲಿ ಇಷ್ಟು ಪ್ರಮಾಣದ ಗಿಳಿಗಳು ಸಾವನ್ನಪ್ಪಿದ್ದು, ಹಕ್ಕಿ ಜ್ವರ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಮೃತಗಿಳಿಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಅವುಗಳ ಸಾವಿಗೆ ವಿಷ ಪ್ರಾಶನ ಕಾರಣವಾಗಿದೆ ಎಂದು ದೃಢಪಟ್ಟಿದೆ.
ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವು ಗಿಳಿಗಳು ಜೀವಂತ ಇದ್ದವು. ಆದರೆ, ಆಹಾರದಲ್ಲಿನ ವಿಷ ಪ್ರಮಾಣ ತೀವ್ರವಾಗಿದ್ದ ಕಾರಣ ಅವು ಬದುಕಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ತಿಳಿಸಿದ್ದಾರೆ.
ಗಿಳಿಗಳ ಈ ಸಾವು ಈ ಪ್ರದೇಶದಲ್ಲಿ ಹಕ್ಕಿ ಜ್ವರದ ಆತಂಕವನ್ನು ಉಂಟು ಮಾಡಿತ್ತು. ಪಶು ವೈದ್ಯರು ಇವುಗಳ ಪರೀಕ್ಷೆ ನಡೆಸಿದಾಗ ಇದರಲ್ಲಿ ಯಾವುದೇ ಜ್ವರದ ಸುಳಿವು ಕಂಡು ಬಂದಿಲ್ಲ. ಈ ಘಟನೆ ಬೆನ್ನಲ್ಲೇ ಇದೀಗ ಈ ಸೇತುವೆ ಸುತ್ತಮುತ್ತ ಪಕ್ಷಿಗಳಿಗೆ ಆಹಾರ ನೀಡುವಿಕೆಗೆ ನಿರ್ಬಂಧ ವಿಧಿಸಲಾಗಿದ್ದು, ಇದರ ಕಟ್ಟುನಿಟ್ಟಿನ ಜಾರಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾವನ್ನಪ್ಪಿದ ಪಕ್ಷಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಬಲ್ಪುರಕ್ಕೆ ಕಳುಹಿಸಲಾಗಿದೆ.
ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಪ್ರಕಾರ, ವಿಷ ಉಣಿಸುವಿಕೆ ಅಥವಾ ಸೂಕ್ತವಲ್ಲದ ಆಹಾರಗಳು ಈ ಸಾವಿಗೆ ಕಾರಣವಾಗಿದೆ. ಪಶು ಪಾಲನ ಮತ್ತು ಅರಣ್ಯ ಇಲಾಖೆ ತಂಡ ಹಾಗೇ ವನ್ಯಜೀವಿ ವಿಭಾಗವೂ ಕಳೆದ ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದು, ನಿವಾಸಿಗಳಿಗೂ ಕೂಡ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ಕೈ ಕಾರ್ಯಕರ್ತನ ಸಾವಿಗೆ ಭರತ್ ರೆಡ್ಡಿ ಕಾರಣ, ಕೂಡಲೇ ಬಂಧಿಸಿ | ಆರ್.ಅಶೋಕ್



















