ಬೆಂಗಳೂರು: ಕೇಂದ್ರ ಸರ್ಕಾರವು ಸಿಗರೇಟ್, ಬೀಡಿ ಸೇರಿ ಹಲವು “ಸಿನ್ ಗೂಡ್ಸ್”ಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (GST), ಅಬಕಾರಿ ಸುಂಕ, ಸೆಸ್ ಹೆಚ್ಚಸಿದೆ. ನೂತನ ದರಗಳು ಫೆಬ್ರವರಿ 1ರಿಂದ ಜಾರಿಗೆ ಬರಲಿವೆ. ಅದರಲ್ಲೂ, ಒಂದು ಸಿಗರೇಟ್ ಬೆಲೆಯು 18 ರೂಪಾಯಿಯಿಂದ 72 ರೂಪಾಯಿಗೆ ಏರಿಕೆಯಾಗುತ್ತದೆ ಎಂದು ವರದಿಯಾಗಿದೆ. ಆದರೆ, ಜಿಎಸ್ ಟಿ, ಸುಂಕದ ಲೆಕ್ಕಾಚಾರದ ಪ್ರಕಾರ, ಇಷ್ಟೊಂದು ಜಾಸ್ತಿಯಾಗುವುದಿಲ್ಲ. ಹಾಗಾದರೆ, ಒಂದು ಸಿಗರೇಟ್ ಬೆಲೆ ಎಷ್ಟಾಗಬಹುದು? ಇಲ್ಲಿದೆ ಮಾಹಿತಿ.
ಸಿಗರೇಟ್ ಮೇಲಿನ ಜಿಎಸ್ ಟಿಯನ್ನು ಕೇಂದ್ರ ಸರ್ಕಾರವು ಶೇ.40ರಷ್ಟು ಎಂದು ನಿರ್ಧರಿಸಿದೆ. ಇದರಿಂದಾಗಿ 18 ರೂಪಾಯಿ ಮೌಲ್ಯದ ಒಂದು ಸಿಗರೇಟ್ ಬೆಲೆಯು 19.70 ರೂಪಾಯಿ ಆಗಲಿದೆ. ಇನ್ನು ಇದಕ್ಕೆ ಅಬಕಾರಿ ಸುಂಕವೂ ಅನ್ವಯವಾಗುವುದರಿಂದ ಒಂದು ಸಿಗರೇಟ್ ಬೆಲೆಯು 1-2 ರೂಪಾಯಿ ಜಾಸ್ತಿಯಾಗುವ ಸಾಧ್ಯತೆ ಇದೆ. ಅಲ್ಲಿಗೆ, ಎಲ್ಲ ತೆರಿಗೆ, ಸುಂಕಗಳು ಸೇರಿ ಒಂದು ಸಿಗರೇಟ್ ಗೆ 21ರಿಂದ 22 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.
ಸಿಗರೇಟಿನ ಉದ್ದ, ಬ್ರ್ಯಾಂಡ್, ಗುಣಮಟ್ಟದ ಆಧಾರದ ಮೇಲೆ ಕೇಂದ್ರ ಸರ್ಕಾರವು 1 ಸಾವಿರ ಸಿಗರೇಟ್ ಗಳ ಮೇಲಿನ ಅಬಕಾರಿ ಸುಂಕವನ್ನು 2,050 ರೂಪಾಯಿಯಿಂದ 8,500 ರೂಪಾಯಿವರೆಗೆ ಜಾಸ್ತಿ ಮಾಡಿದೆ. ಇದರಿಂದಾಗಿ ಒಂದು ಸಿಗರೇಟ್ ಬೆಲೆಯು ಸುಮಾರ 4 ರೂಪಾಯಿ ಜಾಸ್ತಿಯಾಗಬಹುದು ಎಂದು ಲೆಕ್ಕ ಹಾಕಲಾಗಿದೆ.
ಕೇಂದ್ರ ಸರ್ಕಾರವು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಜಿಎಸ್ ಟಿ ಸ್ಲ್ಯಾಬ್ ಗಳನ್ನು 4ರಿಂದ 2ಕ್ಕೆ ಇಳಿಸುವ ಮೂಲಕ ಮಹತ್ವದ ಸುಧಾರಣೆ ಜಾರಿಗೆ ತಂದಿತು. ಇದೇ ವೇಳೆ, ಬೀಡಿ, ಪಾನ್ ಮಸಾಲಾ, ಸಿಗರೇಟ್ ಸೇರಿ ಹಲವು ತಂಬಾಕು ಉತ್ಪನ್ನಗಳಿಗೆ ಶೇ.40ರಷ್ಟು ಜಿಎಸ್ ಟಿ ನಿಗದಿಪಡಿಸಿದೆ. ಅದರಂತೆ, ಹೊಸ ತೆರಿಗೆಗಳು ಫೆಬ್ರವರಿ 1ರಿಂದ ಜಾರಿಗೆ ಬರಲಿವೆ.
ಇದನ್ನೂ ಓದಿ: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಸಿಹಿ ಸುದ್ದಿ | ಹೊಸ ವರ್ಷದಲ್ಲಿ ಪ್ರಮುಖ ನಿಯಮಗಳ ಬದಲಾವಣೆ



















