ಚಾಮರಾಜನಗರ : ಕಾಡಿನಲ್ಲಿರಬೇಕಿದ್ದ ಹುಲಿಗಳು ನಾಡಿಗೆ ನುಗ್ಗಿವೆ. ಚಾಮರಾಜನಗರ ತಾಲೂಕಿನ ನಂಜೆದೇವಪುರ ಗ್ರಾಮದ ಬಳಿ ಬರೋಬ್ಬರಿ ಐದು ಹುಲಿಗಳು ಒಟ್ಟಿಗೆ ಪ್ರತ್ಯಕ್ಷವಾಗಿದ್ದು, ಸದ್ಯ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಂಜೆದೇವಪುರ ಸೇರಿ ಮೂರು ಗ್ರಾಮಗಳಲ್ಲಿ ಇಂದಿನಿಂದ ನಾಳೆ ಸಂಜೆ 6ರವರೆಗೂ 144 ಸೆಕ್ಷನ್ ಜಾರಿ ಮಾಡಿ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶ ಹೊರಡಿಸಿದ್ದಾರೆ.
ಡ್ರೋನ್‌ನಲ್ಲಿ 5 ಹುಲಿಗಳು ಓಡಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಹೀಗಾಗಿ ಸಾಕಾನೆಗಳಿಂದಲೂ ಕೂಂಬಿಂಗ್‌ಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ತಿದೆ. ನಿಂತು ಹೋದ ಕ್ವಾರಿಗಳನ್ನೇ ಟೈಗರ್ ಆವಾಸ ಸ್ಥಾನ ಮಾಡಿಕೊಂಡಿದ್ದು, ಹುಲಿಗಳನ್ನ ಡ್ರೈವ್ ಮಾಡೋದು ಬೇಡ ಸೆರೆಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.
ಇನ್ನು ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಶಾಸಕ ಪುಟ್ಟರಂಗಶೆಟ್ಟಿಗೆ ಅಭಯ ನೀಡಿದ್ದು, ಹೆಚ್ಚಿನ ಆನೆ ಹಾಗೂ ನುರಿತ ಪಶು ವೈದ್ಯರನ್ನ ಕಳಿಸುವ ಆಶ್ವಾಸನೆ ನೀಡಿದ್ದಾರೆ. ನುರಿತ ಪಶು ವೈದ್ಯರ ಕೊರತೆ ಇರುವುದನ್ನು ಶಾಸಕ ಪುಟ್ಟರಂಗಶೆಟ್ಟಿ ಒಪ್ಪಿಕೊಂಡಿದ್ದಾರೆ.
ಸದ್ಯ ಶಾಸಕ ಪುಟ್ಟರಂಗಶೆಟ್ಟಿ ಖುದ್ದು ಅರಣ್ಯ ಸಿಬ್ಬಂದಿಯ ಜೊತೆ ಪರಿಶೀಲನೆ ಕಾರ್ಯ ನಡೆಸಿದ್ದಾರೆ. ಅರಣ್ಯ ಸಿಬ್ಬಂದಿಯ ಜೊತೆ ಪರಿಶೀಲನೆ ವೇಳೆ ಡ್ರೋನ್ ಕ್ಯಾಮೆರಾದಲ್ಲಿ ಕಲ್ಲು ಕ್ವಾರಿಯ ಜಾಗದಲ್ಲಿ ತಾಯಿ ಹುಲಿ ಹಾಗೂ ಮರಿಹುಲಿಗಳ ಪಗ್ ಮಾರ್ಕ್ ಪತ್ತೆ ಆಗಿದೆ. ಇದೇ ಕಲ್ಲು ಕ್ವಾರಿಯಲ್ಲಿ 5 ಹುಲಿಗಳು ಬೀಡು ಬಿಟ್ಟಿವೆ.
ಕೂಂಬಿಂಗ್‌ಗೆ ಚಾಲನೆ
ಇನ್ನು ದುಬಾರೆ ಆನೆ ಶಿಬಿರದಿಂದ ಈಗಾಗಲೇ ಈಶ್ವರ ಹಾಗೂ ಲಕ್ಷ್ಮಣ ಆನೆಗಳು ಸ್ಥಳಕ್ಕೆ ಆಗಮಿಸಿದ್ದು, ಕೂಂಬಿಂಗ್ ಕಾರ್ಯಚರಣೆಗೆ ಚಾಲನೆ ನೀಡಲಾಗಿದೆ. ನಂಜೆದೇವಪುರ ಗ್ರಾಮಸ್ಥರು ಗಜಪಡೆಗೆ ಪೂಜೆ ಮಾಡಿ ಸ್ವಾಗತಿಸಿದರು. ಈಶ್ವರನ ಮಾವುತರಾಗಿ ವಿಶ್ವನಾಥ್ ಹಾಗೂ ಮಂಜುನಾಥ್, ಲಕ್ಷ್ಮಣನ ಮಾವುತರಾಗಿ ಸಂಜು ಹಾಗೂ ಸುರೇಶ ಆಗಮಿಸಿದ್ದಾರೆ. ಲಕ್ಷ್ಮಣನಿಗೆ 45 ವರ್ಷಗಳಾಗಿದ್ದು, 50ಕ್ಕೂ ಹೆಚ್ಚು ಕೂಂಬಿಂಗ್ನಲ್ಲಿ ಭಾಗಿಯಾಗಿದ್ದಾನೆ.
ಇದನ್ನೂ ಓದಿ : ತುಂಗಾ ನದಿಯಲ್ಲಿ ಈಜಲು ಹೋಗಿ ಕಾಲೇಜು ವಿದ್ಯಾರ್ಥಿ ಸಾವು



















