ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ನೀಡಿದೆ. ಸರ್ಕಾರಿ ನೌಕರರು ಕಡ್ಡಾಯವಾಗಿ ಸ್ಯಾಲರಿ ಪ್ಯಾಕೇಜ್ ನೋಂದಣಿ (Salary Package Registration) ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, 2026ರ ಜನವರಿ 16ರೊಳಗೆ ಪ್ರತಿಯೊಬ್ಬ ಸರ್ಕಾರಿ ನೌಕರರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಹಾಗಾಗಿ, ಸರ್ಕಾರಿ ನೌಕರರು ಈಗ ಜನವರಿ 16ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕಿದೆ.
ಸರ್ಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ನೇಮಕಗೊಂಡಿರುವ ಎ, ಬಿ ಮತ್ತು ಸಿ ಗುಂಪಿನ ನೌಕರರು ಸ್ಯಾಲರಿ ಪ್ಯಾಕೇಜ್ ಗೆ ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ. ಇದಕ್ಕೂ ಮೊದಲು 2025ರ ಡಿಸೆಂಬರ್ 15 ನೋಂದಣಿಯ ಡೆಡ್ ಲೈನ್ ಆಗಿತ್ತು. ನೋಂದಣಿ ಮಾಡಿಸಿಕೊಳ್ಳದ ನೌಕರರ ಸಂಬಳವನ್ನು ಕೂಡ ತಡೆಹಿಡಿಯಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ನೋಂದಣಿಗೆ ನೌಕರರು ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಕೋರಿದ ಕಾರಣ ಸರ್ಕಾರವು ಗಡುವನ್ನು ವಿಸ್ತರಣೆ ಮಾಡಿದೆ.
ಎ, ಬಿ ಹಾಗೂ ಸಿ ಗುಂಪಿನ ನೌಕರರು ಎಚ್ ಆರ್ ಎಂ ಎಸ್ 2.0 ಆ್ಯಪ್ ಮೂಲಕ ಸ್ಯಾಲರಿ ಪ್ಯಾಕೇಜ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು hrms2.karnataka.gov.in ಪೋರ್ಟಲ್ ಗೆ ಭೇಟಿ ನೀಡುವ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.
ನೋಂದಣಿ ಏಕೆ ಕಡ್ಡಾಯ?
ಸರ್ಕಾರದ ಹಲವು ಪ್ರಯೋಜನಗಳನ್ನು ಪಡೆಯಲು ಸರ್ಕಾರಿ ನೌಕರರಿಗೆ ಸ್ಯಾಲರಿ ಪ್ಯಾಕೇಜ್ ಕಡ್ಡಾಯವಾಗಿದೆ. ಅದರಲ್ಲೂ, ಸರ್ಕಾರಿ ನೌಕರರಿಗೆ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೌಕರರ ಮಾಹಿತಿಯನ್ನು ಅಪ್ ಡೇಟ್ ಮಾಡಲು ಸ್ಯಾಲರಿ ಪ್ಯಾಕೇಜ್ ನೋಂದಣಿ ಪ್ರಮುಖ ಪ್ರಕ್ರಿಯೆಯಾಗಿದೆ. ಇದುವರೆಗೆ ಕೇವಲ 3 ಲಕ್ಷ ನೌಕರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಕರ್ನಾಟಕದ ಕೇಂದ್ರೀಯ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ : ಇಲ್ಲಿದೆ ಹೆಚ್ಚಿನ ವಿವರ



















