ಢಾಕಾ: ಬಾಂಗ್ಲಾದೇಶದ ಭಾರತ ವಿರೋಧಿ ಯುವ ನಾಯಕ ಶರೀಫ್ ಒಸ್ಮಾನ್ ಹಾದಿ ಅಪರಿಚಿತರ ಗುಂಡೇಟಿಗೆ ಬಲಿಯಾದ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಒಸ್ಮಾನ್ ಹಾದಿ, ಭಾರತ ವಿರೋಧಿ ನಿಲುವಿನ ಉಗ್ರ ಭಾಷಣಗಳಿಂದ ಹೆಸರಾದ 32 ವರ್ಷದ ರಾಜಕೀಯ ಮುಖಂಡರಾಗಿದ್ದು, 2024ರ ವಿದ್ಯಾರ್ಥಿ ಚಳವಳಿಯ ಸಮಯದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಪತನದಲ್ಲೂ ಪ್ರಮುಖ ಪಾತ್ರವಹಿಸಿದ್ದರು.
ಹಾದಿ ಢಾಕಾದಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದ ವೇಳೆ ಅಪರಿಚಿತ ದಾಳಿಕೋರರು ಗುಂಡು ಹಾರಿಸಿದ್ದರು. ಸಿಂಗಾಪುರದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಮೃತಪಟ್ಟಿದ್ದು, ಅವರ ಮರಣದ ಸುದ್ದಿಯ ನಂತರ ಸಾವಿರಾರು ಜನರು ಢಾಕಾ ಸೇರಿದಂತೆ ಇತರ ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಢಾಕಾದ ಪ್ರಮುಖ ಪತ್ರಿಕೆಗಳಾದ ದಿ ಡೈಲಿ ಸ್ಟಾರ್ ಹಾಗೂ ಪ್ರೋಥಮ್ ಆಲೋ ಕಚೇರಿಗಳನ್ನು ಪ್ರತಿಭಟನಾಕಾರರು ಬೆಂಕಿಗೆ ಆಹುತಿಗೊಳಿಸಿದ್ದು, ಅಲ್ಲಿನ ಸಿಬ್ಬಂದಿ ಕೆಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರೂ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ತಗಾಂಗ್‌ನಲ್ಲಿ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿಯ ಹೊರಗಡೆ ಕೂಡಾ ಪ್ರತಿಭಟನಾಕಾರರು ಮುತ್ತಿಗೆ ಹಾಕಿ “ಭಾರತ ವಿರೋಧಿ ಘೋಷಣೆ”ಗಳನ್ನು ಕೂಗಿದ್ದಾರೆ. ರಾಜಶಾಹಿಯಲ್ಲಿ ಬಂಗಬಂಧು ಶೇಖ್ ಮುಜಿಬುರ್ ರೆಹ್ಮಾನ್ ಅವರ ನಿವಾಸ ಹಾಗೂ ಅವಾಮಿ ಲೀಗ್ ಕಚೇರಿಗೂ ಬೆಂಕಿ ಹಚ್ಚಲಾಗಿದೆ.
ಈ ಬೆಳವಣಿಗೆಯ ನಡುವೆ, ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ದೇಶದ ಜನತೆಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. “ಹಾದಿಯ ಮರಣವು ದೇಶದ ಪ್ರಜಾಸತ್ತಾತ್ಮಕ ಕ್ಷೇತ್ರಕ್ಕೆ ಅಪಾರ ನಷ್ಟ,” ಎಂದು ಅವರು ದೂರದರ್ಶನ ಭಾಷಣದಲ್ಲಿ ಹೇಳಿದ್ದಾರೆ. ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಭಾರತೀಯ ರಾಯಬಾರಿ ಕಚೇರಿಯು ಬಾಂಗ್ಲಾದೇಶದಲ್ಲಿರುವ ಭಾರತೀಯರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಅನಗತ್ಯವಾಗಿ ಮನೆಗಳಿಂದ ಹೊರಗೆ ಬರದಂತೆ, ಪ್ರಯಾಣಿಸದಂತೆ ಹಾಗೂ ಅಗತ್ಯವಿದ್ದರೆ ರಾಯಭಾರ ಕಚೇರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದೆ.
ಹಾದಿ ಹತ್ಯೆಗೆ ಸಂಬಂಧಿಸಿದ ಪ್ರಕರಣದ ತನಿಖೆ ಆರಂಭವಾಗಿದ್ದು, ಪೊಲೀಸರು ಇಬ್ಬರು ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿ, ಅವರ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ಟಾಕಾ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕೆರೊಲಿನಾದಲ್ಲಿ ವಿಮಾನ ಪತನ | NASCAR ಚಾಲಕ ಗ್ರೆಗ್ ಕುಟುಂಬ ಸೇರಿ 7 ಮಂದಿ ಸಜೀವ ದಹನ



















