ವಾಷಿಂಗ್ಟನ್/ಚಿಕಾಗೊ: ಅಮೆರಿಕದ ಇಲ್ಲಿನಾಯ್ಸ್ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 28 ವರ್ಷದ ಭಾರತೀಯ ಮೂಲದ ಯುವಕನೊಬ್ಬ ತನ್ನ 67 ವರ್ಷದ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ವಿಚಾರಣೆ ವೇಳೆ, “ತಂದೆಯನ್ನು ಕೊಲ್ಲುವುದು ನನ್ನ ಬಾಧ್ಯತೆ ಮತ್ತು ಧಾರ್ಮಿಕ ಕರ್ತವ್ಯವಾಗಿತ್ತು,” ಎಂದು ಆರೋಪಿ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಭಯಾನಕ ತಿರುವು ನೀಡಿದೆ.
ಅಭಿಜಿತ್ ಪಟೇಲ್ (28) ಬಂಧಿತ ಆರೋಪಿಯಾಗಿದ್ದು, ಮೃತಪಟ್ಟವರನ್ನು ಅನುಪಮ್ ಪಟೇಲ್ (67) ಎಂದು ಗುರುತಿಸಲಾಗಿದೆ. ಥ್ಯಾಂಕ್ಸ್‌ಗಿವಿಂಗ್ ವಾರಾಂತ್ಯದಲ್ಲಿ ಈ ದುರಂತ ಸಂಭವಿಸಿದೆ.
ಘಟನೆ ನಡೆದಿದ್ದು ಹೇಗೆ?
ಬೆಳಿಗ್ಗೆ ಅನುಪಮ್ ಪಟೇಲ್ ಅವರ ಪತ್ನಿ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ಮಧುಮೇಹಿಯಾಗಿದ್ದ ತಂದೆ ಮತ್ತು ಮಗ ಮಾತ್ರ ಇದ್ದರು. ಅನುಪಮ್ ಅವರ ಗ್ಲೂಕೋಸ್ ಮಾನಿಟರ್ ಪತ್ನಿಯ ಫೋನ್‌ಗೆ ಕನೆಕ್ಟ್ ಆಗಿತ್ತು. ಬೆಳಿಗ್ಗೆ ಪತಿಯ ದೇಹದಲ್ಲಿನ ಸಕ್ಕರೆ ಪ್ರಮಾಣ (ಶುಗರ್ ಲೆವೆಲ್) ದಿಢೀರ್ ಕುಸಿಯುತ್ತಿರುವುದನ್ನು ಗಮನಿಸಿದ ಪತ್ನಿ, ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.
ಆತಂಕಗೊಂಡು ಬೆಳಿಗ್ಗೆ 10:30ರ ಸುಮಾರಿಗೆ ಮನೆಗೆ ಮರಳಿದಾಗ, ಗ್ಯಾರೇಜ್ ಬಾಗಿಲು ತೆರೆದಿತ್ತು. ಮನೆಯಲ್ಲಿದ್ದ ಮಗ ಅಭಿಜಿತ್, “ನಾನು ಅಪ್ಪನ ಕಥೆ ಮುಗಿಸಿದ್ದೀನಿ, ಹೋಗಿ ನೋಡು” ಎಂದು ಹೇಳಿದ್ದಾನೆ. ಮಲಗುವ ಕೋಣೆಗೆ ಹೋಗಿ ನೋಡಿದಾಗ, ರಕ್ತದ ಮಡುವಿನಲ್ಲಿ ಪತಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಪತ್ನಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಅನುಪಮ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಮಾನಸಿಕ ಅಸ್ವಸ್ಥತೆ ಮತ್ತು ವಿಚಿತ್ರ ವಾದ
ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಅಭಿಜಿತ್ ಶರಣಾಗಿದ್ದಾನೆ. ವಿಚಾರಣೆ ವೇಳೆ, “ಬಾಲ್ಯದಲ್ಲಿ ತಂದೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಹೀಗಾಗಿ ಅವರನ್ನು ಕೊಲ್ಲುವುದು ನನ್ನ ಧಾರ್ಮಿಕ ಕರ್ತವ್ಯವಾಗಿತ್ತು,” ಎಂದು ಹೇಳಿಕೊಂಡಿದ್ದಾನೆ. ಆದರೆ, ವೈದ್ಯಕೀಯ ವರದಿಗಳ ಪ್ರಕಾರ ಅಭಿಜಿತ್ ‘ಸ್ಕಿಜೋಫ್ರೇನಿಯಾ’ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಆತ ಹೇಳುತ್ತಿರುವ ಆರೋಪಗಳು ಕೇವಲ ಭ್ರಮೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮನೆಯಲ್ಲೇ ಇರಲು ಬಿಟ್ಟಿದ್ದೇ ತಪ್ಪಾಯಿತೇ?
ಅಚ್ಚರಿಯ ಸಂಗತಿಯೆಂದರೆ, ತಂದೆಯನ್ನು ಕೊಲ್ಲುವುದಾಗಿ ಅಭಿಜಿತ್ ಈ ಹಿಂದೆಯೇ ಬೆದರಿಕೆ ಹಾಕಿದ್ದ. ಹೀಗಾಗಿ ಆತನ ವಿರುದ್ಧ 2027ರವರೆಗೂ ಅನ್ವಯವಾಗುವಂತೆ ನ್ಯಾಯಾಲಯದ ರಕ್ಷಣಾ ಆದೇಶ ಇತ್ತು. ಆದರೂ, ಮಗನ ಮೇಲಿನ ಮಮತೆಯಿಂದ ಪೋಷಕರು ಆತನನ್ನು ಮನೆಯಲ್ಲೇ ಉಳಿದುಕೊಳ್ಳಲು ಅವಕಾಶ ನೀಡಿದ್ದರು. ಇದೇ ಈಗ ದುರಂತಕ್ಕೆ ಕಾರಣವಾಗಿದೆ.
ಆರೋಪಿ ಅಭಿಜಿತ್ ಪಟೇಲ್ ವಿರುದ್ಧ ‘ಫಸ್ಟ್ ಡಿಗ್ರಿ ಮರ್ಡರ್’ ಪ್ರಕರಣ ದಾಖಲಿಸಲಾಗಿದ್ದು, ಜಾಮೀನು ನಿರಾಕರಿಸಲಾಗಿದೆ. ಅಲ್ಲದೆ, ತಾಯಿಯನ್ನು ಸಂಪರ್ಕಿಸದಂತೆ ಆತನಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಡಿಸೆಂಬರ್ 19ರಂದು ಮುಂದಿನ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ : ಇಂದು ರಾಜ್ಯದ ಈ ಭಾಗಗಳಲ್ಲಿ ತೀವ್ರ ಚಳಿಗಾಳಿ ಎಚ್ಚರಿಕೆ | ಮುಂದೆ ಕಾದಿದೆ ಇನ್ನಷ್ಟು ಚಳಿ!



















