ಶಾಮ್ಲಿ (ಉತ್ತರ ಪ್ರದೇಶ): ಬುರ್ಖಾ ಧರಿಸದೆ ತವರು ಮನೆಗೆ ಹೋಗಿದ್ದಕ್ಕೆ ಕೋಪಗೊಂಡ ಪತಿಯೊಬ್ಬ, ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಬರ್ಬರವಾಗಿ ಹತ್ಯೆ ಮಾಡಿ, ಶವಗಳನ್ನು ಮನೆಯಲ್ಲೇ ಹೂತುಹಾಕಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.
ಫಾರೂಕ್ ಎಂಬಾತನೇ ಬಂಧಿತ ಆರೋಪಿ. ಮೃತಪಟ್ಟವರನ್ನು ಪತ್ನಿ ತಾಹಿರಾ (35), ಪುತ್ರಿಯರಾದ ಶರೀನ್ (14) ಮತ್ತು ಆಫ್ರೀನ್ (6) ಎಂದು ಗುರುತಿಸಲಾಗಿದೆ.

ಆಗಿದ್ದೇನು?:
ಕೆಲಸದ ನಿಮಿತ್ತ ಹಣ ಬೇಕೆಂದು ಪತ್ನಿ ತಾಹಿರಾ ಪತಿಯನ್ನು ಕೇಳಿದ್ದರು. ಈ ವಿಚಾರವಾಗಿ ದಂಪತಿಗಳ ನಡುವೆ ಜಗಳವಾಗಿದೆ. ಕೋಪಗೊಂಡ ತಾಹಿರಾ, ಬುರ್ಖಾ ಧರಿಸದೆಯೇ ತನ್ನ ಪೋಷಕರ ಮನೆಗೆ ತೆರಳಿದ್ದರು. ಪತ್ನಿ ಬುರ್ಖಾ ಧರಿಸದೆ ಹೊರಗೆ ಹೋಗಿದ್ದರಿಂದ “ತನ್ನ ಗೌರವಕ್ಕೆ ಧಕ್ಕೆಯಾಗಿದೆ” ಎಂದು ಭಾವಿಸಿದ ಫಾರೂಕ್, ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದ.
ಒಂದು ತಿಂಗಳ ನಂತರ ಪತ್ನಿಯನ್ನು ಮನವೊಲಿಸಿ ಮನೆಗೆ ಕರೆತಂದ ಆರೋಪಿ, ನಂತರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ಮನೆಯೊಳಗೇ ಗುಂಡಿ ಅಗೆದು ಮೂವರ ಶವಗಳನ್ನು ಹೂತುಹಾಕಿದ್ದ.
ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಒಂದು ವಾರದಿಂದ ತಾಹಿರಾ ಮತ್ತು ಮಕ್ಕಳು ಕಾಣೆಯಾಗಿದ್ದರು. ಈ ಬಗ್ಗೆ ಅನುಮಾನಗೊಂಡ ಗ್ರಾಮದ ಮುಖ್ಯಸ್ಥರು ಮಂಗಳವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಫಾರೂಕ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಎಸ್ಪಿ ಎನ್.ಪಿ. ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮನೆಯಲ್ಲಿ ಹೂತುಹಾಕಿದ್ದ ಮೂರು ಶವಗಳನ್ನು ಹೊರತೆಗೆದಿದ್ದಾರೆ. ಆರೋಪಿ ಹತ್ಯೆಗೆ ಬಳಸಿದ್ದ ಪಿಸ್ತೂಲ್ ಮತ್ತು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ರಾಜ್ಯದ ಕಾರಾಗೃಹಗಳಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ | ಮೊಬೈಲ್, ಗಾಂಜಾ, ಆಯುಧಗಳು ಜಪ್ತಿ



















