ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಸೋಮವಾರ ಬೆಳಿಗ್ಗೆ ದಟ್ಟ ಮಂಜು ಮತ್ತು ತೀವ್ರ ವಾಯು ಮಾಲಿನ್ಯದ ಹೊಡೆತಕ್ಕೆ ಸಿಲುಕಿ ನಲುಗಿದೆ. ಗೋಚರತೆ ಶೂನ್ಯ ಮಟ್ಟಕ್ಕೆ ಕುಸಿದ ಪರಿಣಾಮ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ಭಾರತೀಯ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನಿಂದಾಗಿ ಗೋಚರತೆ ಕಡಿಮೆಯಾದ ಕಾರಣ ಸುರಕ್ಷತೆಯ ದೃಷ್ಟಿಯಿಂದ ಸುಮಾರು 66 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ಒಂದೇ 20ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಿದ್ದು, ಇಂಡಿಗೋ ಮತ್ತು ಸ್ಪೈಸ್‌ಜೆಟ್ ವಿಮಾನಗಳ ಮೇಲೂ ಪರಿಣಾಮ ಬೀರಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ತಮ್ಮ ವಿಮಾನಗಳ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ವಿಮಾನಯಾನ ಸಂಸ್ಥೆಗಳು ಮನವಿ ಮಾಡಿವೆ.
ರೈಲು ಸಂಚಾರದ ಮೇಲೂ ಮಂಜಿನ ಪ್ರಭಾವ ಬಲವಾಗಿದ್ದು, ದೆಹಲಿ ವಿಭಾಗದಲ್ಲಿ ಸುಮಾರು 60 ರೈಲುಗಳು ತಡವಾಗಿ ಸಂಚರಿಸುತ್ತಿವೆ. ಕೆಲವು ರೈಲುಗಳು ನಿಗದಿತ ಸಮಯಕ್ಕಿಂತ ಹಲವು ಗಂಟೆಗಳಷ್ಟು ವಿಳಂಬವಾಗಿ ಓಡುತ್ತಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

‘ಸಿವಿಯರ್ ಪ್ಲಸ್’ ಹಂತಕ್ಕೆ ತಲುಪಿದ ವಾಯು ಗುಣಮಟ್ಟ
ಒಂದೆಡೆ ಮಂಜಿನ ಕಾಟವಾದರೆ, ಮತ್ತೊಂದೆಡೆ ವಾಯು ಮಾಲಿನ್ಯ ಅಪಾಯಕಾರಿ ಮಟ್ಟವನ್ನು ಮೀರಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 456ರ ಗಡಿ ದಾಟಿ ‘ಸಿವಿಯರ್ ಪ್ಲಸ್’ ಅಥವಾ ಅತ್ಯಂತ ಗಂಭೀರ ವಿಭಾಗಕ್ಕೆ ಜಾರಿದೆ. ಅಶೋಕ್ ವಿಹಾರ್ ಪ್ರದೇಶದಲ್ಲಿ ಎಕ್ಯೂಐ 500 ತಲುಪಿದ್ದರೆ, ಆನಂದ್ ವಿಹಾರ್ (493) ಮತ್ತು ದ್ವಾರಕಾ (469) ಪ್ರದೇಶಗಳಲ್ಲಿ ಉಸಿರಾಡಲೂ ಕಷ್ಟವಾಗುವಂತಹ ವಿಷಕಾರಿ ಗಾಳಿ ಆವರಿಸಿದೆ. ನೊಯ್ಡಾದಲ್ಲಿಯೂ ವಾಯು ಗುಣಮಟ್ಟ 454 ದಾಖಲಾಗಿದೆ.
ಆರೋಗ್ಯದ ಮೇಲೆ ಗಂಭೀರ ಪರಿಣಾಮ
ವಿಷಕಾರಿ ಹೊಗೆ ಮತ್ತು ಮಂಜಿನ ಮಿಶ್ರಣ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಳಗಿನ ಜಾವ ವಾಯುವಿನಲ್ಲಿ ಕಲ್ಮಶಗಳು ಹೆಚ್ಚಿರುವುದರಿಂದ ವಾಯುವಿಹಾರ ಅಥವಾ ವ್ಯಾಯಾಮಕ್ಕಾಗಿ ಹೊರಗೆ ಬರದಂತೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸೂರ್ಯನ ಬೆಳಕು ಬಂದು ವಾತಾವರಣ ಸ್ವಲ್ಪ ತಿಳಿಯಾದ ನಂತರವೇ ಹೊರಬರುವುದು ಸೂಕ್ತ. ಅನಿವಾರ್ಯವಾಗಿ ಹೊರಗೆ ಹೋಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ.
ಬೆಳಗಿನ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಚಳಿ ಮತ್ತು ಮಾಲಿನ್ಯದ ಈ ಮಿಶ್ರಣವು ದೆಹಲಿ ನಿವಾಸಿಗಳ ಪಾಲಿಗೆ ನರಕಯಾತನೆ ತಂದೊಡ್ಡಿದೆ.
ಇದನ್ನೂ ಓದಿ; ಮನರೇಗಾ ರದ್ದು, ಹೊಸ ‘ವಿಕಸಿತ್ ಭಾರತ್-ಜಿ ರಾಮ್ ಜಿ’ ಯೋಜನೆ ಜಾರಿಗೆ : ರಾಜ್ಯಗಳ ಮೇಲೆ ಹೆಚ್ಚಿನ ಹಣಕಾಸಿನ ಹೊರೆ



















