ರಾಯಚೂರು: ಯುವಕನೊಬ್ಬ ಯುವತಿಯನ್ನು ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಯ ನಾಟಕವಾಡಿ ಮೋಸ ಮಾಡಿ, ಮತ್ತೊಂದು ಯುವತಿಯೊಂದಿಗೆ ಹಸೆಮಣೆ ಏರಲು ಸಜ್ಜಾಗಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ರಾಯಚೂರು ಮೂಲದ ರಿಷಬ್ ಯುವತಿಗೆ ಮೊಸ ಮಾಡಿದ ಯುವಕ, ಕೊಪ್ಪಳದ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಮಾಡಿಸಿ ಕೈಕೊಟ್ಟಿದ್ದ, ಇದೀಗ ಬೇರೆ ಯುವತಿ ಜತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪ್ರೇಯಿಸಿ ಸ್ಥಳಕ್ಕೆ ಬಂದು ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸಿದ್ದಾಳೆ.

ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ಇಬ್ಬರ ಪರಿಚಯವಾಗಿದ್ದು, ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆ ಬಳಿಕ ಪ್ರೀತಿಯ ಹೆಸರಿನಲ್ಲಿ ಯುವಕ ರಿಷಬ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹೀಗಾಗಿ ಯುವತಿ ಗರ್ಭಿಣಿಯಾಗಿದ್ದು, ಮದುವೆಯಾಗುವ ಭರವಸೆ ನೀಡಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಬಳಿಕ ದೇವಸ್ಥಾನವೊಂದರಲ್ಲಿ ಯುವತಿಯನ್ನು ಮದುವೆಯಾಗಿದ್ದಾನೆ. ಆದರೆ, ನಂತರ ಆಕೆಯನ್ನು ಕಡೆಗಣಿಸಿ ಬೇರೊಂದು ಯುವತಿ ಜೊತೆ ಮದುವೆಯಾಗಲು ಮುಂದಾಗಿದ್ದಾನೆ ಎಂದು ಸಂತ್ರಸ್ತೆ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಆರೋಪಿ ರಿಷಬ್ ಇಂದು (ಡಿಸೆಂಬರ್ 12) ರಾಯಚೂರು ನಗರದಲ್ಲಿ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಲು ಸಕಲ ಸಿದ್ಧತೆ ಮಾಡಿಕೊಂಡಿದ್ದ. ಎಲ್ಲ ಸಂಬಂಧಿಕರು ಸಹ ಸೇರಿದ್ದು, ಮನೆಯಲ್ಲಿ ಮದುವೆ ಸಂಭ್ರಮ ಮಾಡಿತ್ತು. ಆದರೆ, ಮತ್ತೊಂದೆಡೆ ರಿಷಬ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ನೋಡಿ ಕೂಡಲೇ ಕೊಪ್ಪಳದಿಂದ ನೇರವಾಗಿ ರಾಯಚೂರಿಗೆ ಓಡೋಡಿ ಬಂದಿದ್ದಾಳೆ. ಇನ್ನೇನು ರಿಷಬ್ ತಾಳಿ ಕಟ್ಟುವ ಶುಭ ವೇಳೆಯಲ್ಲೇ ಪ್ರೇಯಿಸಿ ಎಂಟ್ರಿ ಕೊಟ್ಟಿದ್ದು, ಮದುವೆ ನಿಲ್ಲಿಸಿದ್ದಾಳೆ.
ಈ ಘಟನಾ ಸಂಬಂಧ ಯುವತಿಯು ಪ್ರಿಯಕರನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಾಯಿ ಮರಿಯನ್ನು ಹೊತ್ತೊಯ್ಧ ಚಿರತೆ | ಸ್ಥಳೀಯರಲ್ಲಿ ಹೆಚ್ಚಿದ ಆತಂಕ



















