ಬೆಂಗಳೂರು : ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಸುಮಾರು 2 ಲಕ್ಷ ರೂ ಬೆಲೆ ಬಾಳುವ ಫಾರಿನ್ ಗಿಳಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಸಾವನ್ನಪ್ಪಿರುವಂತಹ ದಾರುಣ ಘಟನೆ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅರುಣ್ ಕುಮಾರ್ (32) ಮೃತ ದುರ್ದೈವಿ.
ಗಿಳಿಯೊಂದು ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್ ಒಳಭಾಗದಲ್ಲಿರುವ ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು. ಇದನ್ನು ನೋಡಿದ ಅರುಣ್ ಕುಮಾರ್, ಗಿಳಿ ರಕ್ಷಣೆಗೆ ಮುಂದಾಗಿದ್ದಾರೆ. ಅಪಾರ್ಟ್‌ಮೆಂಟ್ ಕಾಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ಗೆ ಕಟ್ಟಿಗೆ ಸೇರಿಸಿ ಓಡಿಸಲು ಪ್ರಯತ್ನಿಸಿದ್ದಾರೆ.
ಅರುಣ್ ಕುಮಾರ್ ಅವರ ಉದ್ದೇಶ ಸರಿಯಾಗಿದ್ದರೂ ವಿಧಿಯಾಟ ಬೇರೆಯೇ ಇತ್ತು. ಈ ವೇಳೆ 66 ಸಾವಿರ ಕೆವಿ ವಿದ್ಯುತ್ ವೈರ್ನಿಂದ ಹೊಡೆದ ಶಾಕ್ಗೆ ಅರುಣ್ ಕಾಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ಸ್ಥಳೀಯರ ಆಕ್ರೋಶ
ಇನ್ನು ಸ್ಥಳಕ್ಕೆ ಬೆಸ್ಕಾಂ ಮತ್ತು ಕೆಇಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಅಪಾರ್ಟ್‌ಮೆಂಟ್ ಒಳಗೆ 65 ಸಾವಿರ ಕೆವಿ ಸಾಮರ್ಥ್ಯದ ವೈರ್ಗಳು ಇರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಡ್ಡಾಯ ಕನ್ನಡ ಭಾಷಾ ನಾಮಫಲಕ ಅಳವಡಿಕೆಗೆ ಎಲ್ಲಾ ಡಿಸಿಗಳಿಗೆ ಸೂಚಿಸಲಾಗಿದೆ | ಶಿವರಾಜ್ ತಂಗಡಗಿ



















