ಬೆಂಗಳೂರು : ಮಗನನ್ನು ಕೊಂದು ಬಳಿಕ ತಾಯಿ ಮತ್ತು ಅಜ್ಜಿ ಕೂಡ ಆತ್ಮಹತ್ಯೆಗೆ ಶರಣಾಗಿರುವಂತಹ ದಾರುಣ ಘಟನೆ ನಗರದ ಕೋರಮಂಗಲದ ತಾವರೆಕೆರೆ ಬಳಿಯ ಎಸ್.ಜಿ.ಪಾಳ್ಯದಲ್ಲಿ ನಡೆದಿದೆ. ಮಗ ಮೌನೀಶ್(14), ತಾಯಿ ಸುಧಾ, ಅಜ್ಜಿ ಮುದ್ದಮ್ಮ ಮೃತರು.
ಮೊದಲು ಪುತ್ರನಿಗೆ ವಿಷ ಕುಡಿಸಿ ಬಳಿಕ ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎಸ್.ಜಿ.ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಸುಧಾ ಮತ್ತು ಮುದ್ದಮ್ಮ ಅವರು ಮೊದಲು ಸಣ್ಣ ಹೋಟೆಲ್‌ನಲ್ಲಿ ಬಿರಿಯಾನಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಲಾಸ್ ಆದ ಬಳಿಕ ಚಿಪ್ಸ್ ಹಾಗೂ ಹಾಲು ಮಾರುತ್ತಿದ್ದರು. ಕೊನೆಗೆ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಸಾಲ ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸುಧಾ ಅವರು ಕೆಲ ವರ್ಷಗಳ ಹಿಂದೆ ಪತಿಯಿಂದ ಬೇರೆಯಾಗಿದ್ದರು. ತಾಯಿ ಮುದ್ದಮ್ಮ ಜೊತೆಗೆ ಸುಧಾ ಮತ್ತು ಮೌನೀಶ್ ವಾಸಿಸುತ್ತಿದ್ದರು. ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸ್ಥಳಕ್ಕೆ ಭೇಟಿ ನೀಡಿದ್ದು, ಡೆತ್ನೋಟ್ ಅಥವಾ ಬೇರೆ ಏನಾದರೂ ಇದೆಯಾ ಎಂದು ಪರಿಶೀಲನೆ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಹೇಳಿದ್ದಿಷ್ಟು
ಇನ್ನು ಪ್ರಕರಣ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಸಾವಾಗಿದೆ ಎಂದು 112ಗೆ ಕರೆ ಬಂದಿತ್ತು. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಮೂವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮೃತರು ಮೂಲತಃ ತಮಿಳುನಾಡಿನವರು. ನಿನ್ನೆ ಧರ್ಮಪುರಿಯ ಒಂದು ದೇವಾಲಯಕ್ಕೆ ಹೋಗಿ ಬಂದಿದ್ದರು. ಬಾಲಕ ಕ್ರೈಸ್ಟ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸಾವಿಗೆ ಕಾರಣ ಏನು ಎಂಬುದನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು | 140 ಕೋಟಿ ರೂ. ವೆಚ್ಚದಲ್ಲಿ ಶಿವಾಜಿನಗರದ ‘ರಸೆಲ್ ಮಾರುಕಟ್ಟೆ’ಗೆ ಹೊಸ ರೂಪ



















