ಭಾರತದ ಹೃದಯ ಭಾಗ ರಕ್ತದ ಬಣ್ಣ ತೊಟ್ಟಿದೆ. ಸಂಜೆ ಹೊತ್ತಿನಲ್ಲಿ ಗುಡುಗಿದ ಸ್ಫೋಟ ದೇಶವನ್ನೇ ಬೆಚ್ಚಿಬೀಳಿಸಿದೆ. ಇದು ಒಂದು ಭಯೋತ್ಪಾದಕ ದಾಳಿ ಎಂದು ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿತ್ತು. ಇದೀಗ ವಿದೇಶಾಂಗ ಕಾರ್ಯದರ್ಶಿ ಕೂಡ ದೆಹಲಿ ಸ್ಫೋಟವನ್ನು ಭಯೋತ್ಪಾದಕ ದಾಳಿ ಎಂದು ಕರೆದಿದ್ದು, ಭಾರತದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
ದೆಹಲಿ ನಗರದ ಮಧ್ಯಭಾಗದಲ್ಲಿರುವ ಗದ್ದಲಮಯ ವ್ಯಾಪಾರ ವಲಯದಲ್ಲಿ ನ.10ರಂದು ಸಂಭವಿಸಿದ ಈ ಭಾರೀ ಸ್ಫೋಟ ರಾಷ್ಟ್ರವನ್ನೇ ಕಂಗೆಡಿಸಿದೆ. ಈ ಮಾರಕ ದಾಳಿಯ ತನಿಖೆಗೆ ಅಮೆರಿಕ ಕೂಡ ಸಹಾಯ ನೀಡಿದೆ. ಆದರೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಭಾರತಕ್ಕೆ ನಮ್ಮ ಸಹಾಯ ಅಗತ್ಯವಿಲ್ಲ, ಭಾರತೀಯ ಅಧಿಕಾರಿಗಳು ತುಂಬಾ ಸಮರ್ಥರಾಗಿ ದಕ್ಷತೆಯಿಂದ ತನಿಖೆ ನಡೆಸುತ್ತಿದ್ದಾರೆಎಂದು ಭಾರತವನ್ನ ಶ್ಲಾಘಿಸಿದ್ದಾರೆ.
ಕೆನಡಾದ ಜಿ7 ವಿದೇಶಾಂಗ ಸಚಿವರ ಸಭೆಯ ನಂತರ ಕೆನಡಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರುಬಿಯೊ,“ದೆಹಲಿಯ ಸ್ಫೋಟವು ನಿಖರವಾಗಿ ಭಯೋತ್ಪಾದಕ ದಾಳಿ. ಶಾಂತಿಯನ್ನು ನಾಶಗೊಳಿಸಲು ಬಯಸಿದ ಶಕ್ತಿ ಎಂದು ಹೇಳಿದ್ದಾರೆ. ಜೊತೆಗೆ ನಾವು ಸಹಾಯ ಮಾಡಲು ಮುಂದಾಗಿದ್ದೇವೆ. ಆದರೆ ಈ ತನಿಖೆಗಳಲ್ಲಿ ಭಾರತೀಯರು ತುಂಬಾ ಸಮರ್ಥರು. ಅವರಿಗೆ ನಮ್ಮ ಸಹಾಯದ ಅಗತ್ಯವಿಲ್ಲ. ಅಂತಹ ಸಂಧರ್ಭ ಬಂದಲ್ಲಿ ನಾವು ಖಂಡಿತ ಸಹಾಯ ಮಾಡುತ್ತೇವೆ ಈಗ ಅವರು ಉತ್ತಮ ಕೆಲಸವೇ ಮಾಡುತ್ತಿದ್ದಾರೆ” ಎಂದು ಶ್ಲಾಘಿಸಿ, ಉತ್ಸಾಹ ತುಂಬಿದ್ದಾರೆ.
ಇನ್ನೂ ಬುಧವಾರ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಈ ಸ್ಪೋಟದಲ್ಲಿ ಜೀವ ಕಳೆದುಕೊಂಡವರಿಗೆ ಮೌನಾಚರಣೆ ಮಾಡಿ ಬಳಿಕ ಮಾತನಾಡಿದ ಮೋದಿ “ದೇಶ ವಿರೋಧಿ ಶಕ್ತಿಗಳು” ನಡೆಸಿದ “ಭಯೋತ್ಪಾದಕ ಘಟನೆ” ಇದು. ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ. ರಾಷ್ಟ್ರವು ಮತ್ತೆ ಒಗ್ಗಟ್ಟಿನಿಂದ ನಿಂತಿದೆ. ಹನ್ನೆರಡು ಜೀವಗಳ ಬಲಿಪಡೆದವರನ್ನು ಸುಮ್ಮನೆ ಬಿಡೋ ಮಾತೇ ಇಲ್ಲ ಈ ದಾಳಿಯ ಹಿಂದೆ ಯಾರ ಕೈ ಇದೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುತ್ತದೆ. ಭಾರತದ ಭದ್ರತಾ ವ್ಯವಸ್ಥೆಯೂ ಯಾವುದೇ ಭಯೋತ್ಪಾದಕ ಶಕ್ತಿಗಳಿಗೆ ಪ್ರತಿಕಾರ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ಉಗ್ರರಿಗೆ ಎಚ್ಚರಿಕೆ ನೀಡಿದೆ.
ದೆಹಲಿಯ ಸ್ಫೋಟದಲ್ಲಿ ಹನ್ನೆರಡು ಮಂದಿ ಜೀವ ಕಳೆದುಕೊಂಡ ನಂತರ, ದೇಶದಾದ್ಯಂತ ಭದ್ರತಾ ವ್ಯವಸ್ಥೆ ಬಲಪಡಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ NIAಯೂ ಘಟನಾ ಸ್ಥಳವನ್ನು ಸಂಪೂರ್ಣವಾಗಿ ಸೀಲ್ ಮಾಡಿದ್ದು, ಡೆಲ್ಲಿ ಪೊಲೀಸ್, NSG ಕಮಾಂಡೋಗಳು, ಬಾಂಬ್ ನಿಷ್ಕ್ರಿಯ ಪಡೆಗಳು, ಇವರೆಲ್ಲರು ಹತ್ತಿರದ ಪ್ರದೇಶಗಳಲ್ಲಿ ತಪಾಸಣೆ ಮುಂದುವರಿಸಿದ್ದಾರೆ.ಇನ್ನೂ ವಿಧಿವಿಜ್ಞಾನ ತಜ್ಞರು, ಭಯೋತ್ಪಾದನಾ ನಿಗ್ರಹ ತಂಡಗಳು ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿವೆ. ದಾಳಿಯ ಉದ್ದೇಶ, ಹಿಂದಿನವರನ್ನು ಗುರುತಿಸುವ ಕೆಲಸ ಚುರುಕುಗೊಂಡಿದೆ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಿದೆ.
ಕೆನಡಾದ ನಯಾಗರಾದಲ್ಲಿ ನಡೆದ ಜಿ7 ವಿದೇಶಾಂಗ ಸಚಿವರ ಸಭೆಯ ಹೊರತಾಗಿ ಇಎಎಂ ಜೈಶಂಕರ್ ಮತ್ತು ಕಾರ್ಯದರ್ಶಿ ರುಬಿಯೊ ಭೇಟಿಯಾದರು. ಅವರ ಚರ್ಚೆಯ ಸಮಯದಲ್ಲಿ, ಇತ್ತೀಚಿನ ದೆಹಲಿ ಸ್ಫೋಟದಲ್ಲಿ ಮಡಿದ ಜೀವಗಳಿಗೆ ರುಬಿಯೊ ಸಂತಾಪ ಸೂಚಿಸಿದರು. ಇದಕ್ಕೆ ಜೈ ಶಂಕರ್ ಧನ್ಯಾವಾದ ಸಮರ್ಪಿಸಿದರು. ಈ ಸಭೆಯು ಜಾಗತಿಕ ಬೆಳವಣಿಗೆಗಳ ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಒಳಗೊಂಡಂತಹ ಸಭೆಯಾಗಿತ್ತು.
ದೆಹಲಿಯ ಸ್ಫೋಟ ದೇಶದ ಭದ್ರತೆಯ ವಿರುದ್ಧದ ಎಚ್ಚರಿಕೆಯ ಗಂಟೆ. ಆದರೆ ಈ ಬಾರಿ ಸರ್ಕಾರ ಹಾಗೂ ಭದ್ರತಾ ಪಡೆಗಳು ಸಂಪೂರ್ಣ ಸಜ್ಜಾಗಿವೆ. ಪ್ರತಿಯೊಂದು ಸಂಚು, ಪ್ರತಿಯೊಂದು ಶಂಕಿತ ಚಲನವಲನ ಈಗ ಭಾರತದ ಕಣ್ಣಿನ ಕಣದಲ್ಲಿದೆ. ಅಷ್ಟೇ ಅಲ್ಲದೇ ಎಲ್ಲ ರಾಷ್ಟ್ರಗಳು ಭಾರತದ ಬೆನ್ನೆಲುಬಾಗಿ ನಿಂತೆವೆ ಎಂದು ವಿದೇಶಾಂಗ ಕಾರ್ಯದರ್ಶಿಯರ ಮಾತುಗಳಲ್ಲೇ ತಿಳಿಯುತ್ತದೆ. ಏನೇ ಆಗಲಿ 12 ಜೀವ ಬಲಿ ಪಡೆದವರ ಸಂಹಾರದ ಬಗ್ಗೆ ಭಾರತ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ : ಕರ್ನಾಟಕ ಸರ್ಕಾರದ KHPT ಸಂಸ್ಥೆಯಲ್ಲಿ ಕೋ-ಆರ್ಡಿನೇಟರ್ ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ



















