ವೃಂದಾವನ (ಉತ್ತರ ಪ್ರದೇಶ): ಕುಡಿತದ ಚಟಕ್ಕೆ ಸಂಬಂಧಿಸಿದ ಜಗಳ ವಿಕೋಪಕ್ಕೆ ತಿರುಗಿ, ಮಗನೊಬ್ಬ ತನ್ನ ಕೋಟ್ಯಾಧಿಪತಿ ಉದ್ಯಮಿ ತಂದೆಯನ್ನೇ ಗುಂಡಿಕ್ಕಿ ಹತ್ಯೆ ಮಾಡಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವೃಂದಾವನದಲ್ಲಿ ನಡೆದಿದೆ.
ಪ್ರಖ್ಯಾತ ‘ದಿನೇಶ್ 555’ ಬೀಡಿ ಬ್ರ್ಯಾಂಡ್‌ನ ಸಂಸ್ಥಾಪಕ, ಉದ್ಯಮಿ ಸುರೇಶ್ ಚಂದ್ ಅಗರ್ವಾಲ್ (75) ಅವರೇ ಪುತ್ರನಿಂದ ಕೊಲೆಗೀಡಾದ ನತದೃಷ್ಟ ತಂದೆ. ಇವರನ್ನು ಹತ್ಯೆಗೈದ ಮಗ ನರೇಶ್ ಅಗರ್ವಾಲ್ (50) ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
‘ದಿನೇಶ್ 555’ ಕಂಪನಿಯ ಹಿನ್ನೆಲೆ
ಸುರೇಶ್ ಚಂದ್ ಅಗರ್ವಾಲ್ ಅವರು 1977ರಲ್ಲಿ ‘ದಿನೇಶ್ 555’ ಎಂಬ ಬ್ರ್ಯಾಂಡ್‌ನೊಂದಿಗೆ ಬೀಡಿ ಉದ್ಯಮವನ್ನು ಆರಂಭಿಸಿದರು. ಸಣ್ಣದಾಗಿ ಆರಂಭವಾದ ಈ ಕಂಪನಿ, ಕ್ರಮೇಣ ಬಹುಕೋಟಿ ವ್ಯವಹಾರವಾಗಿ ಬೆಳೆಯಿತು. ಉತ್ತರ ಪ್ರದೇಶ ಮಾತ್ರವಲ್ಲದೆ, ಬಿಹಾರ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಗೂ ತಮ್ಮ ವ್ಯವಹಾರವನ್ನು ವಿಸ್ತರಿಸಿ, ದೇಶದ ಪ್ರಮುಖ ಬೀಡಿ ಉದ್ಯಮಿಗಳಲ್ಲಿ ಒಬ್ಬರಾಗಿ ಸುರೇಶ್ ಚಂದ್ ಗುರುತಿಸಿಕೊಂಡಿದ್ದರು.
ಜಗಳಕ್ಕೆ ಕಾರಣವಾದ ಕುಡಿತದ ಚಟ
ಸುರೇಶ್ ಚಂದ್ ಅಗರ್ವಾಲ್ ಅವರು ಕೆಲವು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇವರ ಮಗ ನರೇಶ್ ಅಗರ್ವಾಲ್ ತೀವ್ರ ಕುಡಿತದ ಚಟಕ್ಕೆ ದಾಸನಾಗಿದ್ದು, ಈ ವಿಚಾರವಾಗಿ ತಂದೆ-ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶುಕ್ರವಾರ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ನರೇಶ್, ತನ್ನ ಬಳಿಯಿದ್ದ ಪರವಾನಗಿ ಪಡೆದ ರಿವಾಲ್ವರ್‌ನಿಂದ ತಂದೆ ಸುರೇಶ್ ಚಂದ್ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ತನ್ನ ಕೃತ್ಯದ ಗಂಭೀರತೆಯನ್ನು ಅರಿತ ಕೂಡಲೇ, ಅದೇ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ-ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಅನಿಲ್ ಅಂಬಾನಿಗೆ ಇ.ಡಿ. ಮತ್ತಷ್ಟು ಬಿಸಿ : ಮುಂಬೈ ಬಂಗಲೆ ಸೇರಿ 3,084 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ



















