ಭೋಪಾಲ್: ಪ್ರತಿ ದೀಪಾವಳಿಯಲ್ಲೂ ಚಕ್ರ, ರಾಕೆಟ್, ಹೂಕುಂಡದಂತಹ ಹೊಸ ಹೊಸ ಪಟಾಕಿಗಳು ಮಾರುಕಟ್ಟೆಗೆ ಬರುತ್ತವೆ. ಆದರೆ ಈ ವರ್ಷದ ಹೊಸ ಟ್ರೆಂಡ್ ಆಗಿದ್ದ ‘ಕಾರ್ಬೈಡ್ ಗನ್’ ಅಥವಾ ‘ದೇಸಿ ಪಟಾಕಿ ಗನ್’ ಇದೀಗ ಮಕ್ಕಳ ಪಾಲಿಗೆ ಮಾರಣಾಂತಿಕವಾಗಿ ಪರಿಣಮಿಸಿದ್ದು, ಪೋಷಕರು ಮತ್ತು ವೈದ್ಯರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ.
ಕೇವಲ ಮೂರು ದಿನಗಳಲ್ಲಿ, ಮಧ್ಯಪ್ರದೇಶದಾದ್ಯಂತ 122 ಕ್ಕೂ ಹೆಚ್ಚು ಮಕ್ಕಳು ಗಂಭೀರ ಕಣ್ಣಿನ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು, 14 ಮಕ್ಕಳು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ.
ಸರ್ಕಾರ ಅಕ್ಟೋಬರ್ 18 ರಂದು ಈ ಕಾರ್ಬೈಡ್ ಗನ್‌ಗಳಿಗೆ ನಿಷೇಧ ಹೇರಿದ್ದರೂ, ವಿದಿಶಾ ಜಿಲ್ಲೆಯಲ್ಲಿ ಈ ಕಚ್ಚಾ ‘ಕಾರ್ಬೈಡ್ ಗನ್’ಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗಿತ್ತು. ಈಗ ಅತಿ ಹೆಚ್ಚು ಮಕ್ಕಳು ಕುರುಡಾಗಿದ್ದು ಹಾಗೂ ಕಣ್ಣಿನ ಹಾನಿಗೆ ಒಳಗಾಗಿದ್ದು ಇದೇ ಜಿಲ್ಲೆಯಲ್ಲಿ. ಆಟಿಕೆಗಳಂತೆ ಕಾಣುವ ಈ ಸಾಧನಗಳನ್ನು 150 ರಿಂದ 200 ರೂ.ಗೆ ಮಾರಾಟ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ 17 ವರ್ಷದ ನೇಹಾ, “ನಾವು ಮನೆಯಲ್ಲಿ ತಯಾರಿಸಿದ ಕಾರ್ಬೈಡ್ ಗನ್ ಖರೀದಿಸಿದ್ದೆವು. ಅದು ಸ್ಫೋಟಗೊಂಡಾಗ, ನನ್ನ ಒಂದು ಕಣ್ಣು ಸಂಪೂರ್ಣವಾಗಿ ಸುಟ್ಟುಹೋಯಿತು. ನನಗೆ ಏನೂ ಕಾಣಿಸುತ್ತಿಲ್ಲ” ಎಂದು ಕಣ್ಣೀರು ಹಾಕಿದ್ದಾಳೆ. ಮತ್ತೊಬ್ಬ ಬಾಲಕ ರಾಜ್ ವಿಶ್ವಕರ್ಮ, “ನಾನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಮನೆಯಲ್ಲೇ ಪಟಾಕಿ ಗನ್ ಮಾಡಲು ಯತ್ನಿಸಿದೆ. ಅದು ನನ್ನ ಮುಖದಲ್ಲೇ ಸ್ಫೋಟಗೊಂಡು, ಈಗ ಮಾಮು ಕಣ್ಣನ್ನೇ ಕಳೆದುಕೊಂಡೆ” ಎಂದು ಕಣ್ಣೀರಿಟ್ಟಿದ್ದಾನೆ.
ಈ ಭೀಕರ ಘಟನೆಯ ನಂತರ ವಿದಿಶಾ ಪೊಲೀಸರು ಈ ಸಾಧನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರು ಜನರನ್ನು ಬಂಧಿಸಿದ್ದಾರೆ. ಇಂತಹ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇನ್ಸ್‌ಪೆಕ್ಟರ್ ಆರ್.ಕೆ. ಮಿಶ್ರಾ ತಿಳಿಸಿದ್ದಾರೆ.
ಭೋಪಾಲ್, ಇಂದೋರ್, ಜಬಲ್‌ಪುರ್ ಮತ್ತು ಗ್ವಾಲಿಯರ್‌ನ ಆಸ್ಪತ್ರೆಗಳ ಕಣ್ಣಿನ ವಿಭಾಗಗಳು ಈ ಗನ್‌ಗಳಿಂದ ಗಾಯಗೊಂಡ ಮಕ್ಕಳಿಂದ ತುಂಬಿ ತುಳುಕುತ್ತಿವೆ. ಭೋಪಾಲ್‌ನ ಹಮೀದಿಯಾ ಆಸ್ಪತ್ರೆಯೊಂದರಲ್ಲೇ 72 ಗಂಟೆಗಳಲ್ಲಿ 26 ಮಕ್ಕಳು ದಾಖಲಾಗಿದ್ದಾರೆ.
“ಇದು ಆಟಿಕೆಯಲ್ಲ, ಸುಧಾರಿತ ಸ್ಫೋಟಕ. ಈ ಸಾಧನವು ಕಣ್ಣುಗಳಿಗೆ ನೇರವಾಗಿ ಹಾನಿ ಮಾಡುತ್ತದೆ. ಸ್ಫೋಟದಿಂದಾಗಿ ಲೋಹದ ತುಣುಕುಗಳು ಮತ್ತು ಕಾರ್ಬೈಡ್ ಆವಿ ಬಿಡುಗಡೆಯಾಗಿ ರೆಟಿನಾವನ್ನು ಸುಡುತ್ತವೆ. ಅನೇಕ ಮಕ್ಕಳ ಕಣ್ಣಿನ ಪಾಪೆಗಳು ಒಡೆದು ಹೋಗಿ ಶಾಶ್ವತ ಅಂಧತ್ವಕ್ಕೆ ಕಾರಣವಾಗಿದೆ” ಎಂದು ಹಮೀದಿಯಾ ಆಸ್ಪತ್ರೆಯ ಸಿಎಮ್‌ಎಚ್‌ಒ ಡಾ. ಮನೀಶ್ ಶರ್ಮಾ ಎಚ್ಚರಿಸಿದ್ದಾರೆ.
ಪ್ಲಾಸ್ಟಿಕ್ ಅಥವಾ ತವರದ ಪೈಪ್‌ಗಳನ್ನು ಬಳಸಿ, ಅದರಲ್ಲಿ ಗನ್‌ಪೌಡರ್, ಬೆಂಕಿ ಕಡ್ಡಿಗಳ ತುದಿಯ ಮದ್ದು ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ತುಂಬಿ ಮಕ್ಕಳು ಈ ಗನ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಮಿಶ್ರಣಕ್ಕೆ ಬೆಂಕಿ ಹಚ್ಚಿದಾಗ, ಅದು ತೀವ್ರವಾಗಿ ಸ್ಫೋಟಗೊಂಡು, ಅದರ ಅವಶೇಷಗಳು ಮತ್ತು ಉರಿಯುವ ಅನಿಲವು ನೇರವಾಗಿ ಮುಖ ಮತ್ತು ಕಣ್ಣುಗಳಿಗೆ ಬಡಿಯುತ್ತದೆ.
ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್ ಈ ಅಪಾಯಕಾರಿ ಪ್ರವೃತ್ತಿಯ ಹಿಂದಿನ ಪ್ರಮುಖ ಕಾರಣವಾಗಿದೆ. ‘ಫೈರ್‌ಕ್ರ್ಯಾಕರ್ ಗನ್ ಚಾಲೆಂಜ್’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹದಿಹರೆಯದವರು ಈ ಗನ್‌ಗಳನ್ನು ಸಿಡಿಸುವ ವಿಡಿಯೋಗಳು ವೈರಲ್ ಆಗಿದ್ದು, ಲೈಕ್ಸ್ ಮತ್ತು ವೀವ್ಸ್‌ಗಾಗಿ ಮಕ್ಕಳು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.



















