ಮೆಕ್ಸಿಕೋ ಸಿಟಿ: ವಿಮಾನ ಹಾರಾಟದ ತರಬೇತಿ ಪಡೆಯುತ್ತಿದ್ದಾಗಲೇ ಮೆಕ್ಸಿಕನ್ ಟಿವಿ ನಿರೂಪಕಿ ಡೆಬೊರಾ ಎಸ್ಟ್ರೆಲ್ಲಾ (43) ಅವರು ವಿಮಾನ ಅಪಘಾತದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ನ್ಯೂವೋ ಲಿಯಾನ್‌ನ ಗಾರ್ಸಿಯಾದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅವರ ಜೊತೆಗಿದ್ದ ತರಬೇತುದಾರ ಬ್ರಿಯಾನ್ ಲಿಯೊನಾರ್ಡೊ ಬ್ಯಾಲೆಸ್ಟೆರೋಸ್ ಅರ್ಗುಟಾ ಕೂಡ ಸಾವನ್ನಪ್ಪಿದ್ದಾರೆ.
“ಟೆಲಿಡೇರಿಯೊ ಮಟುಟಿನೊ” ಕಾರ್ಯಕ್ರಮದ ನಿರೂಪಕಿಯಾಗಿದ್ದ ಡೆಬೊರಾ ಅವರು ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವು ಅತಿ ವೇಗವಾಗಿ, ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿ ಪಾರ್ಕ್ ಇಂಡಸ್ಟ್ರಿಯಲ್ ಸಿಯುಡಾಡ್ ಮಿತ್ರಾಸ್ ಬಳಿ ಪತನಗೊಂಡಿದೆ. ಅಪಘಾತದ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಬೇರೆ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೂ ಕೆಲವೇ ಕ್ಷಣಗಳ ಮೊದಲು ಡೆಬೊರಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ “ಏನೆಂದು ಊಹಿಸಿ?” ಎಂಬ ಶೀರ್ಷಿಕೆಯೊಂದಿಗೆ ವಿಮಾನ ನಿಲ್ದಾಣದಲ್ಲಿ ನಿಂತಿರುವ ಫೋಟೋ ಹಂಚಿಕೊಂಡಿದ್ದರು. ಸ್ಥಳೀಯರ ಪ್ರಕಾರ, ಆ ವಿಮಾನಯಾನ ಸಂಸ್ಥೆಯ ವಿಮಾನಗಳು ನೆಲಕ್ಕೆ ಸಮೀಪದಲ್ಲಿ ಅಭ್ಯಾಸದ ಭಾಗವಾಗಿ ಹಾರಾಟ ನಡೆಸುತ್ತಿದ್ದವು ಎಂದು ವರದಿಯಾಗಿದೆ.
2018ರಿಂದ ಮಲ್ಟಿಮೀಡಿಯಾಸ್ ಟೆಲಿವಿಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡೆಬೊರಾ, ಮಾಂಟೆರ್ರಿಯಲ್ಲಿ ಪ್ರಸಾರವಾಗುತ್ತಿದ್ದ “ಟೆಲಿಡೇರಿಯೊ ಡೆಲ್ ಮಟಿನೊ” ಎಂಬ ಬೆಳಗಿನ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿದ್ದರು. ಅವರ ಸಾವಿಗೆ ಸಂಸ್ಥೆಯು ಪ್ರತಿಕ್ರಿಯಿಸಿದ್ದು “ಡೆಬೊರಾ ಅವರ ಅಕಾಲಿಕ ಹಾಗೂ ದುರಂತ ಸಾವು ನಮಗೆ ಆಘಾತ ತಂದಿದ್ದು, ತೀವ್ರ ದುಃಖವಾಗಿದೆ” ಎಂದು ಸಂತಾಪ ಸೂಚಿಸಿದೆ.
ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ತನಿಖೆ ಆರಂಭಿಸಿವೆ. ವಿಮಾನದಲ್ಲಿ ಯಾವುದೇ ಯಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಗಾರ್ಸಿಯಾ ಮೇಯರ್ ಮ್ಯಾನುಯೆಲ್ ಕ್ಯಾವಾಜೋಸ್ ತಿಳಿಸಿದ್ದಾರೆ.



















