ಕನ್ನಡ ಸೇರಿದಂತೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್ (83) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೋಟ ಶ್ರೀನಿವಾಸ ರಾವ್ ಹೈದರಾಬಾದ್ ನಲ್ಲಿರುವ ತಮ್ಮ ಮನೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟನ ನಿಧನಕ್ಕೆ ಇಡೀ ಚಿತ್ರರಂಗವೇ ಸಂತಾಪ ಸೂಚಿಸಿದೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೋಟ ಶ್ರೀನಿವಾಸ ರಾವ್ ಮಗ ತೀರಿಕೊಂಡ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಖಳನಾಯಕ, ಪೋಷಕರ ಪಾತ್ರ ಹಾಗೂ ಹಾಸ್ಯನಟನಾಗಿ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಶ್ರೀನಿವಾಸ ರಾವ್ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಿಂದ ಬಂದ ನಟ ತಮ್ಮದೇ ಆದ ನಟನಾ ಶೈಲಿಯಿಂದ ಜನರ ಮನ ಗೆದ್ದಿದ್ದರು. ವಿಶೇಷವಾಗಿ ನಟ ಬಾಬು ಮೋಹನ್ ಅವರೊಂದಿಗೇ ಅವರು ಸುಮಾರು 60 ಚಿತ್ರಗಳಲ್ಲಿ ನಟಿಸಿದ್ದಾರೆ.



















