ಮುಂಬೈ: ಮುಂಬೈನಲ್ಲಿ ಕ್ಯಾಂಟೀನ್ ಕಾಂಟ್ರ್ಯಾಕ್ಟರ್‌ವೊಬ್ಬರಿಗೆ ಥಳಿಸಿದ ವಿಡಿಯೋ ವೈರಲ್ ಆಗಿ ರಾಜಕೀಯ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ, ಶಿವಸೇನೆ (ಏಕನಾಥ್ ಶಿಂಧೆ ಬಣ) ಶಾಸಕ ಸಂಜಯ್ ಗಾಯಕ್ವಾಡ್ ಅವರು ದಕ್ಷಿಣ ಭಾರತೀಯರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. “ಡಾನ್ಸ್ ಬಾರ್ ಮತ್ತು ಲೇಡೀಸ್ ಬಾರ್‌ಗಳನ್ನು ನಡೆಸುವ” ದಕ್ಷಿಣ ಭಾರತೀಯರಿಗೆ ಮಹಾರಾಷ್ಟ್ರದಲ್ಲಿ ಆಹಾರ ಪೂರೈಕೆ ಗುತ್ತಿಗೆಗಳನ್ನು ನೀಡಬಾರದು ಎಂದು ಗಾಯಕ್ವಾಡ್ ಹೇಳಿದ್ದಾರೆ.
ಬುಲ್ಡಾನಾದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗಾಯಕ್ವಾಡ್, “ಶೆಟ್ಟಿ ಎಂಬ ಗುತ್ತಿಗೆದಾರನಿಗೆ ಏಕೆ ಗುತ್ತಿಗೆ ನೀಡಲಾಯಿತು? ಅದನ್ನು ಮರಾಠಿ ವ್ಯಕ್ತಿಗೆ ಕೊಡಿ. ನಾವು ಏನನ್ನು ತಿನ್ನುತ್ತೇವೆ ಎಂದು ಅವರಿಗೆ ತಿಳಿದಿದೆ. ಅವರು ನಮಗೆ ಉತ್ತಮ ಗುಣಮಟ್ಟದ ಆಹಾರ ನೀಡುತ್ತಾರೆ. ದಕ್ಷಿಣ ಭಾರತೀಯರು ಡಾನ್ಸ್ ಬಾರ್‌ಗಳು, ಲೇಡೀಸ್ ಬಾರ್‌ಗಳನ್ನು ನಡೆಸುತ್ತಾರೆ. ಮಹಾರಾಷ್ಟ್ರದ ಸಂಸ್ಕೃತಿಯನ್ನು ಹಾಳುಮಾಡುತ್ತಾರೆ. ಅವರು ನಮ್ಮ ಮಕ್ಕಳನ್ನು ಭ್ರಷ್ಟಗೊಳಿಸಿದ್ದಾರೆ. ಅವರು ಹೇಗೆ ಒಳ್ಳೆಯ ಆಹಾರವನ್ನು ನೀಡಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
ಮುಂಬೈನ ಉಪಾಹಾರ ಗೃಹದಲ್ಲಿ ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಹಳಸಿದ ಆಹಾರವನ್ನು ನೀಡಿದ ಆರೋಪದ ಮೇಲೆ ಗಾಯಕ್ವಾಡ್ ಆತನಿಗೆ ಕಪಾಳಮೋಕ್ಷ ಮಾಡಿ, ಹಲ್ಲೆ ನಡೆಸಿದಿದ್ದರು.
ವೈರಲ್ ಆದ ವಿಡಿಯೋದಲ್ಲಿ, ಗಾಯಕ್ವಾಡ್ ಬನಿಯನ್ ಮತ್ತು ಟವೆಲ್‌ನಲ್ಲಿ ಕಾಣಿಸಿಕೊಂಡಿದ್ದು, ಗುತ್ತಿಗೆದಾರನಿಗೆ ದಾಲ್ ಪ್ಯಾಕೆಟ್ ವಾಸನೆ ನೋಡುವಂತೆ ಒತ್ತಾಯಿಸಿ ನಂತರ ಕಪಾಳಮೋಕ್ಷ ಮಾಡಿ, ಹೊಡೆದಿರುವುದು ದಾಖಲಾಗಿದೆ.
ಗುತ್ತಿಗೆದಾರ ಹಲ್ಲೆಯ ಆಘಾತದಿಂದ ನೆಲಕ್ಕೆ ಕುಸಿದು ಎದ್ದೇಳಲು ಹೆಣಗಾಡುತ್ತಿದ್ದರೂ, ಗಾಯಕ್ವಾಡ್ ಹಲ್ಲೆ ಮುಂದುವರಿಸಿದ್ದರು. ಘಟನೆಯ ನಂತರ, “ಈತನಿಗೆ ಅಪ್ನೆ ಸ್ಟೈಲ್ ಸೆ (ನನ್ನ ಶೈಲಿಯಲ್ಲಿ)” ಪಾಠ ಕಲಿಸಿದ್ದೇನೆ ಎಂದು ಗಾಯಕ್ವಾಡ್ ಹೇಳಿಕೊಂಡಿದ್ದರು.
ಕ್ಷಮೆಯಾಚಿಸದ ಗಾಯಕ್ವಾಡ್ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, “ಮತ್ತೆ ಇಂತಹ ಕೃತ್ಯ ನಡೆದರೆ ಪುನರಾವರ್ತಿಸಲು ಹಿಂಜರಿಯುವುದಿಲ್ಲ” ಎಂದೂ ಹೇಳಿರುವುದು ವಿವಾದಕ್ಕೆ ಕಾರಣವಾಗಿತ್ತು.
ಮುಖ್ಯಮಂತ್ರಿಗಳಿಂದ ಖಂಡನೆ:
ಗಾಯಕ್ವಾಡ್ ಅವರ ಹಲ್ಲೆಯ ವಿಡಿಯೋ ವೈರಲ್ ಆಗಿ ವ್ಯಾಪಕ ಖಂಡನೆಗೆ ಗುರಿಯಾದ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಕೃತ್ಯವನ್ನು ಖಂಡಿಸಿದ್ದರು. ಇಂತಹ ವರ್ತನೆಯು ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ “ತಪ್ಪು ಸಂದೇಶ” ಕಳುಹಿಸುತ್ತದೆ ಎಂದು ಅವರು ಹೇಳಿದ್ದಾರೆ.
“ಇಂತಹ ವರ್ತನೆ ಯಾರಿಗೂ ತಕ್ಕುದಲ್ಲ. ಇದು ರಾಜ್ಯ ಶಾಸಕಾಂಗದ ಮತ್ತು ಶಾಸಕರ ಘನತೆಗೆ ಧಕ್ಕೆಯುಂಟುಮಾಡುತ್ತದೆ… ಎಲ್ಲಾ ಶಾಸಕರ ಬಗ್ಗೆ ಅಧಿಕಾರದ ದುರುಪಯೋಗವಾಗುತ್ತಿದೆ ಎಂಬ ತಪ್ಪು ಸಂದೇಶ ಜನರಲ್ಲಿ ಹೋಗುತ್ತದೆ,” ಎಂದು ಫಡ್ನವೀಸ್ ಹೇಳಿದ್ದಾರೆ.
“ಸಂಜಯ್ ಗಾಯಕ್ವಾಡ್ ಅವರ ಕೃತ್ಯಗಳು ಅಸಮರ್ಪಕ ಎಂದು ನಾನು ಅವರಿಗೆ ತಿಳಿಸಿದ್ದೇನೆ. ನಾನು ಅವರ ಕೃತ್ಯಗಳನ್ನು ಸಮರ್ಥಿಸುವುದಿಲ್ಲ. ಏನಾದರೂ ತಪ್ಪು ನಡೆದರೆ ಕಾನೂನು ಕ್ರಮ ಕೈಗೊಳ್ಳಬಹುದು ಆದರೆ ಜನರಿಗೆ ಹೊಡೆಯುವುದು ಸರಿಯಲ್ಲ” ಎಂದು ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.



















