ಬೆಂಗಳೂರು: ನಗರದಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳನ್ನು ನಿರ್ಮೂಲನೆ ಮಾಡುವುದು ನಮ್ಮ ಗುರಿ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಎಲ್ಲ ಕಡೆ ಶಾಶ್ಚತವಾಗಿ ಬ್ಲಾಕ್ ಸ್ಪಾಟ್ ಗಳನ್ನು ನಿರ್ಮೂಲನೆ ಮಾಡಬೇಕು. ಅದಕ್ಕಾಗಿ ವಲಯವಾರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ರಸ್ತೆ ಬದಿ ಕಸ ಬಿಸಾಡುವವರ ಮೇಲೆ ನಿಗಾವಹಿಸಿ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ತ್ಯಾಜ್ಯ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದ್ದು, ಮೂಲದಲ್ಲಿಯೇ ಗೊಬ್ಬರ ತಯಾರಿಕಾ ಘಟಕಗಳು, ಬಯೋ ಮಿಥನೈಜೇಷನ್ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ವಲಯ ಆಯುಕ್ತರಾದ ಸ್ನೇಹಲ್ ಮಾತನಾಡಿ, ಪೂರ್ವ ವಲಯದಲ್ಲಿ ಕಸದ ಸಮಸ್ಯೆ ನಿವಾರಣೆಗಾಗಿ ಸಮಗ್ರ ಯೋಜನೆ ರೂಪಿಸಲಾಗುವುದು. ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ಅಭಿಯಾನ ಕೈಗೊಳ್ಳಲಾಗುವುದು. ನಾಗರೀಕರು ಕಸದ ಸಮಸ್ಯೆಯಿದ್ದಲ್ಲಿ ವಾಟ್ಸಾಪ್ ಸಂಖ್ಯೆ 9448197197 ಗೆ ಸಂದೇಶದ ಮೂಲಕ ದೂರು ನೀಡುವ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಟೋಲ್ ಫ್ರೀ ಸಂಖ್ಯೆ 1533 ಗೂ ಸಹ ಸಂದೇಶ ರವಾನಿಸಬಹುದಾಗಿ ತಿಳಿಸಿದರು.
ನಾಗರಿಕರಿಂದ ಬಂದಂತಹ ಪ್ರಮುಖ ಸಲಹೆಗಳು:
- ಸ್ವಚ್ಛತಾ ಸ್ವಯಂ ಸೇವಕರನ್ನು ನಿಯೋಜಿಸಿಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ
- ರಸ್ತೆ ಬದಿ, ಖಾಲಿ ಜಾಗ, ರಾಜಕಾಲುವೆಗಳಲ್ಲಿ ತ್ಯಾಜ್ಯ ಬಿಸಾಡುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ.
- ಇಂದಿರಾನಗರ ವ್ಯಾಪ್ತಿಯಲ್ಲಿ ಸ್ವಚ್ಛತಾ ಆಟೋ ಟಿಪ್ಪರ್ಗಳ ಸಂಖ್ಯೆಯನ್ನು ಹೆಚ್ಚಿಸಲು ಮನವಿ
- ತ್ಯಾಜ್ಯ ವಿಲೇವಾರಿ ಮಾಡುವ ಕುರಿತು ಮನೆ-ಮನೆ ಜಾಗೃತಿ ಮೂಡಿಸುವ ಕೆಲಸ ಮಾಡಿ.
- ವಾರ್ಡ್ ವ್ಯಾಪ್ತಿಯಲ್ಲಿ ಕಾಂಪೋಸ್ಟರ್ ಗಳ ವ್ಯವಸ್ಥೆ ಕಲ್ಪಿಸಿ.
- ಹಸಿ ಹಾಗೂ ಒಣ ತ್ಯಾಜ್ಯಕ್ಕಾಗಿ ಪ್ರತ್ಯೇಕ ಬಿನ್ಗಳ ವ್ಯವಸ್ಥೆ ಮಾಡಿ, ಮಿಶ್ರ ತ್ಯಾಜ್ಯವನ್ನು ಸಂಗ್ರಹಿಸುವುದನ್ನು ತಡೆಯಿರಿ.
- ಏಕ ಬಳಕೆ ಪ್ಲಾಸ್ಟಿಕ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕ್ರಮವಹಿಸಿ
- ಫರ್ನಿಚರ್, ಸೋಫಾ, ಕಮೋರ್ಡ್ಸ್, ಹಾಸಿಗೆಗಳನ್ನು ಗಳನ್ನು ರಸ್ತೆ ಬದಿ ಬಿಸಾಡುವುದನ್ನು ತಡೆಯಲು ಕ್ರಮವಹಿಸಿ
ಈ ವೇಳೆ ಬೆಂ.ಘ.ತ್ಯಾ.ನಿ.ನಿ ದ ಸಿ.ಇ. ಓ. ಆದ ಡಾ. ಕೆ. ಹರೀಶ್ ಕುಮಾರ್, ಜಂಟಿ ಆಯುಕ್ತರಾದ ಸರೋಜಾ, ಬೆಂ.ಘ.ತ್ಯಾ.ನಿ.ನಿ ದ ಸಿ.ಓ.ಓ. ಆದ ರಮಾಮಣಿ, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಲೋಕೇಶ್, ಸುಗುಣಾ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.



















