ಮಂಗಳೂರು: ಹಿಂದೂ ನಾಯಕರ ಮನೆಗೆ ಜಿಲ್ಲೆಯ ಪೊಲೀಸರು ರಾತ್ರೋರಾತ್ರಿ ನುಗ್ಗಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಸಂಕಷ್ಟ ಶುರುವಾಗಿದೆ.
ಮಧ್ಯರಾತ್ರಿ ಯಾವುದೇ ಕಾರಣ ನೀಡದೆ, ವಿಷಯ ತಿಳಿಸದೆ ಆರೆಸ್ಸೆಸ್ ನಾಯಕರೊಬ್ಬರ ಮನೆಗೆ ಪೊಲೀಸರು ಭೇಟಿ ನೀಡಿದ್ದರು. ಈ ವೇಳೆ ಫೋಟೊ ತೆಗೆಸಿಕೊಂಡು ಜಿಪಿಎಸ್ ಅಪ್ಲೋಡ್ ಮಾಡಿದ್ದರು ಎನ್ನಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಎಸ್ಪಿ ಅರುಣ್ಗೆ ಸಂಕಷ್ಟ ಶುರುವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High Court) ನೋಟಿಸ್ ನೀಡಿದೆ. ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜೂನ್ 1 ರಂದು ಯು.ಜಿ. ರಾಧಾ ಅವರ ಉಪ್ಪಿನಂಗಡಿ ಮನೆಗೆ ರಾತ್ರಿ ಬಂದಿದ್ದ ಪೊಲೀಸರು ಫೋಟೊ ತೆಗೆದು ಅಪ್ ಲೋಡ್ ಮಾಡಿದ್ದರು. ಆಗ ಪೊಲೀಸರು ಹಿರಿಯ ಅಧಿಕಾರಿಗಳ ಆದೇಶವಿದೆ ಎಂದಿದ್ದರು.
ಇದನ್ನು ಖಂಡಿಸಿದ್ದ ಯು.ಜಿ. ರಾಧಾ ಅವರು ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾ ಕಾರಣ ಕಸಿದಿದ್ದಾರೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಇದರಿಂದ ನನ್ನ ಖಾಸಗಿತನ, ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ಈ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 20 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠ, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ನೋಟಿಸ್ ನೀಡಿದೆ.
ಪ್ರಕರಣ ಸಂಬಂಧ ಸೂಕ್ತ ದಾಖಲೆ ಸಲ್ಲಿಸುವಂತೆ ತಾಕೀತು ಮಾಡಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಂತರ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಗೊಂಡಿತ್ತು. ಹೀಗಾಗಿ ಪೊಲೀಸರು ಹಿಂಸಾಚರ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಯಾವುದೇ ಪ್ರಕರಣದಲ್ಲಿ ಭಾಗಿಯಾಗದಿದ್ದರೂ ಆರೆಸ್ಸೆಸ್ ನಾಯಕರ ಮನೆಗೆ ತೆರಳಿ ಫೋಟೋ ತೆಗೆದಿಸ್ದದರು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಹಿಂದೂ ಕಾರ್ಯಕರ್ತರು ಪೊಲೀಸರ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.