ಮಹಾಭಾರತ…ದಾಯಾದಿಗಳ ನಡುವಿನ ಕಲಹಕ್ಕೆ ಹೊತ್ತಿದ ಯುದ್ಧದ ಕಿಚ್ಚು ಸರ್ವನಾಶ ಸೃಷ್ಟಿಸಿದ್ದು, ಮಹಾಕಾವ್ಯದ ಒಂದು ಭಾಗ. ಅವತ್ತು ಕೌರವರು-ಪಾಂಡವರ ನಡುವೆ ನಡೆದ ಕದನದಲ್ಲಿ ಒಂದೆಡೆ ಅಕ್ಷೋಹಿಣಿ ಸೇನೆ ಇದ್ದರೆ ಇತ್ತ ಸರ್ವಾಂತರ್ಯಾಮಿ ಶ್ರೀಕೃಷ್ಣನಿದ್ದ.
ಈ ಮಹಾಭಾರತದ ಕುರುಕ್ಷೇತ್ರಕ್ಕೂ ಇಂದು ಇಸ್ರೇಲ್-ಇರಾನ್ ನಡುವಿನ ಸಮರಕ್ಕೂ ಯಾವ ವ್ಯತ್ಯಾಸವಿಲ್ಲ. ಇವರದ್ದೂ ದಾಯಾದಿ ಸಂಬಂಧವೇ. ಆದರೂ ಪರಸ್ಪರ ಮಚ್ಚು ಮಸಿಯುತ್ತಲೇ ಬಂದವರು. ಈ ಸಹೋದರರ ಸಮರದಲ್ಲೀಗ ಶ್ರೀಕೃಷ್ಣನ ರಂಗಪ್ರವೇಶವಾಗಿದೆ. ಅಂದು ಪಾಂಡವರ ಪರ ನಿಂತಿದ್ದ ಸುದರ್ಶನ ಚಕ್ರಧಾರಿ ಇವತ್ತು ಅಮೆರಿಕ ರೂಪದಲ್ಲಿ ಇಸ್ರೇಲ್ ಬೆನ್ನಿಗೆ ನಿಂತಿದೆ.
ಇಸ್ರೇಲ್-ಇರಾನ್ ನಡುವಿನ ಕದನಕ್ಕೆ ಅಮೆರಿಕ ಎಂಟ್ರಿ
ಇರಾನ್ ಗೆ ಅಂತಿಮ ಸಂದೇಶ ರವಾನಿಸಿದ್ರಾ ದೊಡ್ಡಣ್ಣ
ಕೆನಡಾದಲ್ಲಿ ನಡೆದಿರುವ ಜಿ7 ಶೃಂಗಸಭೆಯ ಉಪಸ್ಥಿತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಅಮೆರಿಕ ಅಧ್ಯಕ್ಷ ದಿಢೀರ್ ತವರಿಗೆ ಮರಳಿದ್ದಾರೆ. ಹಾಗಿದ್ದರೆ, ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗುತ್ತೆ ಅಂತಲೇ ಉಲ್ಲೇಖಿಸಲಾಗಿತ್ತು. ಬಟ್ ಅಮೆರಿಕ ಆ ಕೆಲಸ ಮಾಡುತ್ತಿಲ್ಲ. ಬದಲಿಗೆ ಇಸ್ರೇಲ್ ಮುಂದೆ ಮಂಡಿಯೂರುವಂತೆ ಇರಾನ್ ಮೇಲೆ ಒತ್ತಡ ಹೇರ್ತಿದೆ. ಅಷ್ಟೇ ಅಲ್ಲಾ ಇರಾನ್ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಎಲ್ಲಡಗಿದ್ದಾನೆ ಅನ್ನೋದು ಗೊತ್ತು, ಆದ್ರೆ ಕೊಲ್ಲೋದಿಲ್ಲ ಅಂತಾ ಹೇಳುವ ಮೂಲಕ ಅಮೆರಿಕ ಶರಣಾಗತಿಯ ಸಂದೇಶ ರವಾನಿಸಿದೆ.
ಇಸ್ರೇಲ್ ಮೇಲೆ ಅಮೆರಿಕಗೆ ಲವ್ ಯಾಕೆ
ಆ ಏಕಾಂಗಿ ಹೋರಾಟವೇ ಪ್ರೀತಿ ಹುಟ್ಟಿಸಿಬಿಡ್ತಾ
ಇವತ್ತು ಸಮಸ್ತ ಜಗತ್ತೇ ಕೇಳ್ತಿರೋ ಪ್ರಶ್ನೆ ಅಂದ್ರೆ ಅದು ಅಮೆರಿಕಗೆ ಇಸ್ರೇಲ್ ಮೇಲಿನ ಈ ಪ್ರೀತಿಗೆ ಕಾರಣವೇನು ಅಂತಾ. ಹೌದು, ಇದೊಂಥರಾ ಅಮರ ಮಧುರ ಪ್ರೇಮದ ಕಥೆ. ಯಾವ ಲೈಲಾ ಮಜ್ನೂಗೂ ಕಮ್ಮಿಯಿಲ್ಲದ ಎರಡು ಹೃದಯಗಳ ಕತೆ. ಅದು 1967ರ ಕಾಲಮಾನ, ಇಸ್ರೇಲ್ ಅನ್ನೋ ಸುರಸುಂದರಿಯ ಮೇಲೆ ನೆರೆಯ ಈಜಿಪ್ಟ್, ಜೋರ್ಡಾನ್, ಪಾಲಿಸ್ತೀನ್ ಸೇರಿದಂತೆ ಹತ್ತಾರು ಬಂಡುಕೋರ ಗುಂಪುಗಳು ವಕ್ರದೃಷ್ಟಿ ಬೀರಿದ್ವು. ಜೂನ್ 5ರಿಂದ 10 ರವರೆಗು ನಡೆದ ಘನಘೋರ ಯುದ್ಧದಲ್ಲಿ ಇಸ್ರೇಲ್ ತನ್ನ ರಾಷ್ಟ್ರದ ಉಳಿವಿಗೆ ಸೆಣಸಿದ ಪರಿ ಅಮೆರಿಕವನ್ನು ಮೊದಲ ನೋಟದ ಮೋಹಕ್ಕೆ ಒಳಗಾಗಿಸಿಬಿಡ್ತು. ಲವ್ ಅಟ್ ಫಸ್ಟ್ ಸೈಟ್ ಅನ್ನೋ ಹಾಗೆ ಅವತ್ತು ಇಸ್ರೇಲ್ ಎದುರಾಳಿಗಳನ್ನು ಐದೇ ದಿನದಲ್ಲಿ ಬಗ್ಗು ಪಡೆದ ಪರಿ ಅಮೆರಿಕದ ಕಣ್ಣಲ್ಲಿ ಇಸ್ರೇಲ್ ಮೇಲಿನ ಮೋಹವನ್ನು ಅಗಣಿತವಾಗಿಸಿತು.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಕಣ್ಣು ಇಸ್ರೇಲ್
ಸೌದಿ ಅರಬ್ ದೋಖಾ ಮರೆತಿಲ್ಲ ಅಮೆರಿಕ
ನಿಜಕ್ಕೂ ತನ್ನ ಮನದನ್ನೆಯಂತಿರುವ ಇಸ್ರೇಲ್ ಇವತ್ತು ಇರಾನ್ ಬಗ್ಗು ಬಡೆಯುವ ಸಂಕಲ್ಪ ಮಾಡಿದೆ. ಇಂಥಾ ಹೊತ್ತಲ್ಲಿ ಇಸ್ರೇಲ್ ಪರ ನಿಂತಿರುವ ಅಮೆರಿಕ ನಿಜಕ್ಕೂ ಮಹಾಭಾರತದಲ್ಲಿ ಅರ್ಜುನನ ಬೆನ್ನಿಗೆ ಶ್ರೀಕೃಷ್ಣ ಪರಮಾತ್ಮ ನಿಂತಂತೆ ನಿಂತು ಕಾಪಾಡ್ತಿದೆ. ಹಾಗೆ ನೋಡಿದ್ರೆ ಅಮೆರಿಕದ ಈ ಕೃಷ್ಣಾವತಾರದ ಹಿಂದೆ ಸ್ವಾರ್ಥದ ನೆರಳು ಸ್ಪಷ್ಟವಿದೆ. ಧರ್ಮ, ಜಾತಿ, ಪ್ರೇಮ ಯಾವುದಕ್ಕೂ ಬೆಲೆ ನೀಡದ ಅಮೆರಿಕ ತನ್ನ ಸ್ವಾರ್ಥಕ್ಕಾಗಿ ಯಾರನ್ನೇ ಬಲಿ ಕೊಡಲು ಹಿಂದೇಟು ಹಾಕದ ಮನಸ್ಥಿತಿಯದ್ದು. ಆದ್ರೆ ಮಧ್ಯಪ್ರಾಚ್ಯದಲ್ಲಿ ಚೀನಾ-ರಷ್ಯಾದ ಪ್ರಾಬಲ್ಯ ಹೆಚ್ಚಾಗದಂತೆ ನೋಡಿಕೊಳ್ಳಲು ಇಸ್ರೇಲ್ ಇಂದು ಅಮೆರಿಕದ ಕಣ್ಣಿನಂತೆ ಕೆಲಸ ಮಾಡ್ತಿದೆ. 2001ರ ಅಮೆರಿಕ ಮೇಲಿನ ಲಾಡನ್ ದಾಳಿ ಬೆನ್ನಲ್ಲೇ ಸೌದಿ ಜೊತೆಗಿನ ಸಂಬಂಧ ಹಳಸಿದೆ. ಹೀಗಾಗಿ ಮದ್ಯಪ್ರಾಚ್ಯದ ಮೇಲೆ ಹದ್ದಿನ ಕಣ್ಣಿಡಲು ಇಸ್ರೇಲ್ ಅನಿವಾರ್ಯ. ಹೀಗಾಗಿ ಇಸ್ರೇಲ್ ಸಾರಿರುವ ಸಮರ ತನ್ನದೇ ಎನ್ನುವಂತೀಗ ಅಖಾಡಕ್ಕೆ ಧುಮುಕಿರುವ ಟ್ರಂಪ್, ಇಸ್ರೇಲ್ ನೆರವಿಗೆ ನೌಕೆ ಹಾಗೂ ಯುದ್ಧ ವಿಮಾನಗಳನ್ನು ರಣರಂಗಕ್ಕಿಳಿಸಿದೆ. ಈ ಮೂಲಕ ಇರಾನ್ ಶವಪೆಟ್ಟಿಗೆ ಅಂತಿಮ ಮೊಳೆ ಹೊಡೆಯಲು ಅಮೆರಿಕ ರಂಗ ಪ್ರವೇಶಿಸಿದೆ.