ಕಾಲ ಬದಲಾಗ್ತಿದೆ….ಮುಟ್ಟಿದೆಲ್ಲಾ ಅಂಗೈಯಲ್ಲೇ ಸಿಗುವ ಸಮಯ ಹತ್ತಿರವಾಗುತ್ತಿದೆ. ಈಗಾಗಲೇ ಭಾರತದ ಬಹುತೇಕ ನಗರಗಳಲ್ಲಿ ಇಂಟರ್ ನೆಟ್ ಸಂಪರ್ಕವಿಲ್ಲದ ಮನೆಗಳು ವಿರಳ. ಆದರೀಗ ಈ ನಗರೀಕರಣದ ನೆರಳು ಹೋಬಳಿ, ಗ್ರಾಮ ಅಷ್ಟೇ ಯಾಕೆ ಅತ್ಯಂತ ಕುಗ್ರಾಮವನ್ನೂ ಸಂಪರ್ಕಿಸುವ ಕ್ರಾಂತಿಗೆ ಕ್ಷಣಗಣನೆ ಆರಂಭವಾಗಿದೆ. ದೂರಸಂಪರ್ಕ ಕ್ಷೇತ್ರದಲ್ಲಿ ಮಹೋನ್ನತ ಬದಲಾವಣೆಯನ್ನು ತರಲು ಜಗತ್ತಿನ ಆಗರ್ಭಶ್ರೀಮಂತ ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಮುಂದಾಗುತ್ತಿದೆ. ಹೌದು, ಭಾರತದಲ್ಲಿ ತನ್ನ ಇಂಟರ್ ನೆಟ್ ಸೇವೆ ನೀಡುವ ಸ್ಟಾರ್ ಲಿಂಕ್ ಮನವಿಗೆ ಕಡೆಗೂ ಅಂಕಿತ ಬಿದ್ದಿದೆ.
ಮೂರು ವರ್ಷಗಳ ಬಳಿಕ ಸ್ಟಾರ್ ಲಿಂಕ್ ಗೆ ಸಮ್ಮತಿ
ಹಾಗೆ ನೋಡಿದರೆ ಎಲಾನ್ ಮಸ್ಕ್ ಒಡೆತನದ ಕಂಪನಿ ಸ್ಟಾರ್ ಲಿಂಕ್ಸ್ ಭಾರತದಲ್ಲಿ ಈ ಹೊತ್ತಿಗಾಗಲೇ ಕಾರ್ಯಾರಂಭ ಮಾಡಿ ವರ್ಷಗಳೇ ಕಳೆದಿರಬೇಕಿತ್ತು. ಬಟ್, ದೇಶದ ಭದ್ರತೆ ಮತ್ತು ಸುರಕ್ಷತೆಗೆ ಈ ಉಪಗ್ರಹ ಆಧರಿತ ಸೇವೆಯಿಂದ ಧಕ್ಕೆ ಬರುತ್ತಾ ಅನ್ನೋ ಅನುಮಾನಗಳಿದ್ದ ಹಿನ್ನಲೆಯಲ್ಲಿ ಅನುಮತಿಯನ್ನು ತಡೆಹಿಡಿಯಲಾಗಿತ್ತು.
2022ರಲ್ಲೇ ಕಾರ್ಯಸೇವೆಗೆ ಅನುಮತಿ ಕೋರಿದ್ದ ಸ್ಟಾರ್ ಲಿಂಕ್ಸ್ ಗೆ ಈಗ ನೇರ ಉಪಗ್ರಹ ಆಧರಿಸಿತ ಇಂಟರ್ ನೆಟ್ ಸೇವೆ ಒದಗಿಸಲು ಕೇಂದ್ರ ಸರ್ಕಾರದ ಸಮ್ಮತಿಸಿದೆ. ಈ ಹಿನ್ನೆಲೆಯಲ್ಲೇ ನಿನ್ನೆಯಷ್ಟೇ ದೂರಸಂಪರ್ಕ ಇಲಾಖೆ ಜೊತೆ ಸ್ಟಾರ್ ಲಿಂಕ್ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಭಾರತದ ದೂರ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಗೆ ವೇದಿಕೆ ಸಿದ್ಧವಾಗಿದೆ.
ಉಪಗ್ರಹ ಆಧರಿತ ಸೇವೆ ಒದಗಿಸುವ ಮೂರನೇ ಕಂಪನಿ
ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಶನ್ ಬೈ ಸ್ಯಾಟಲೈಟ್ ಅಂದರೆ ಜಿಎಂಪಿಸಿಎಸ್ ಸೇವೆಯನ್ನು ಸ್ಟಾರ್ ಲಿಂಕ್ ಭಾರತದಲ್ಲಿ ನೀಡಲಿದೆ. ಸರಳ ಅರ್ಥದಲ್ಲಿ ಹೇಳುವುದಾದರೆ ಈ ಸೇವೆ ನೀಡಲು ಯಾವುದೇ ಕೇಬಲ್, ಮೊಬೈಲ್ ಟವರ್ ನ ಅಗತ್ಯವಿರೋದಿಲ್ಲ. ಭೂಮಿಯಿಂದ ಕೇವಲ 500ರಿಂದ 550 ಕಿಲೋಮೀಟರ್ ದೂರದಲ್ಲಿ ಸುತ್ತುತ್ತಿರೋ ಸ್ಯಾಟಲೈಟ್ ಗಳ ನೆರವಿನೊಂದಿಗೆ ಇಂಟರ್ ನೆಟ್ ಸೇವೆ ನೀಡಲಾಗುತ್ತೆ. ಇದೇ ಮಾದರಿಯಲ್ಲೇ ಸ್ಟಾರ್ ಲಿಂಕ್ ತನ್ನ ಸೇವೆ ನೀಡಲು ಭಾರತದಲ್ಲಿ ಅನುಮತಿ ಪಡೆದ ಮೂರನೇ ಕಂಪನಿಯಾಗಿದೆ.
ಈಗಾಗಲೇ ರಿಲಯನ್ಸ್ ಜಿಯೋ ಕೂಡಾ ಉಪಗ್ರಹ ಆಧರಿತ ಸೇವೆ ನೀಡಲು ಕೇಂದ್ರದ ಅನುಮತಿ ಪಡೆದಿದೆ. ಇದರೊಟ್ಟಿಗೆ ಓನ್ ವೆಬ್ ಅನ್ನೋ ಇಂಗ್ಲೆಂಡ್ ಮೂಲದ ಸಂಸ್ಥೆಗೂ ಭಾರತದಲ್ಲಿ ಸೇವೆ ನೀಡಲು ಲೈಸೆನ್ಸ್ ನೀಡಲಾಗಿದೆ. ಇನ್ನು ನಿನ್ನೆಯಷ್ಟೇ ಸ್ಟಾರ್ ಲಿಂಕ್ ಗೆ ಲೈಸೆನ್ಸ್ ಲಭಿಸಿದ್ದು, ಮುಂದಿನ 15ರಿಂದ 20 ದಿನಗಳಲ್ಲಿ ಭಾರತದಲ್ಲಿ ಪ್ರಯೋಗಾರ್ಥ ಪರೀಕ್ಷೆಗಳು ಆರಂಭವಾಗಲಿವೆ.
ಮುಂದಿನ ದಿನಗಳಲ್ಲಿ ಸೇವೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾದ್ರೆ, ಆಗ ಗ್ರಾಹಕರು ಸ್ಟಾರ್ ಲಿಂಕ್ ಉಪಕರಣ ಮತ್ತು ಸೇವೆಗಳನ್ನು ಒಪ್ಪಂದದಂತೆ ಜಿಯೋ ಮತ್ತು ಏರ್ ಟೆಲ್ ಮಳಿಗೆಗಳಲ್ಲಿ ಪಡೆಯಬಹುದಾಗಿದೆ. ಈ ಮೂಲಕ ಕಡೆಗೂ ಜಗತ್ತಿನ ಅತ್ಯಂತ ವೇಗದ ಇಂಟರ್ ನೆಟ್ ಸೇವೆ ಶೀಘ್ರವೇ ಭಾರತಕ್ಕೂ ದಾಪುಗಾಲಿಡುತ್ತಿದೆ.