ನವದೆಹಲಿ: ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನವು ಪತರಗುಟ್ಟಿಹೋಗಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳನ್ನು ಭಾರತೀಯ ವಾಯುಪಡೆಯು ಅಕ್ಷರಶಃ ನಿರ್ನಾಮಗೊಳಿಸಿದೆ. ಇದಾದ ಬೆನ್ನಲ್ಲೇ, ಉಗ್ರರ ನೆಲೆಗಳು ಹೇಗೆ ಸಂಪೂರ್ಣವಾಗಿ ಧ್ವಂಸಗೊಂಡಿವೆ? ಮೊದಲು ನೆಲೆಗಳು ಹೇಗಿದ್ದವು? ಈಗ ಹೇಗಾಗಿವೆ ಎಂಬುದಕ್ಕೆ ಸಾಕ್ಷ್ಯವಾಗಿ ಸ್ಯಾಟಲೈಟ್ ಫೋಟೋಗಳು ಲಭ್ಯವಾಗಿವೆ. ಫೋಟೋಗಳನ್ನು ಗಮನಿಸಿದರೆ, ಉಗ್ರರ ನೆಲೆಗಳು ಮಸಣದಂತಾಗಿವೆ.
ಬಹವಾಲ್ಪುರದಲ್ಲಿರುವ ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ನೆಲೆ, ಮುರಿಡ್ಕೆಯಲ್ಲಿರುವ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ನೆಲೆಗಳನ್ನು ಭಾರತದ ಸೇನೆಯು ಧ್ವಂಸಗೊಳಿಸಿದೆ. ಎರಡೂ ಉಗ್ರರ ನೆಲೆಗಳು ಸಂಪೂರ್ಣವಾಗಿ ಧ್ವಂಸಗೊಂಡಿರುವುದನ್ನು ಫೋಟೋಗಳು ಹಾಗೂ ವೀಡಿಯೋಗಳ ಮೂಲಕ ಗಮನಿಸಬಹುದಾಗಿದೆ. ಕಟ್ಟಡಗಳು ಸಂಪೂರ್ಣವಾಗಿ ಕುಸಿದಿವೆ. ಒಬ್ಬನೇ ಒಬ್ಬ ಉಗ್ರನ ಚಟುವಟಿಕೆ ಇಲ್ಲಿ ಕಾಣಿಸುತ್ತಿಲ್ಲ. ಎರಡೂ ನೆಲೆಗಳು ಸಂಪೂರ್ಣವಾಗಿ ಹಾನಿಯಾಗಿರುವುದನ್ನು ಕಾಣಬಹುದಾಗಿದೆ.

ಮ್ಯಾಕ್ಸರ್ ಟೆಕ್ನಾಲಜೀಸ್ ಎಂಬ ಸಂಸ್ಥೆಯು ಉಗ್ರರ ನೆಲೆಗಳ ಸ್ಯಾಟಲೈಟ್ ಫೋಟೋಗಳನ್ನು ಬಿಡುಗಡೆ ಮಾಡಿದೆ. ಮುರಿಡ್ಕೆ ಉಗ್ರರ ನೆಲೆಯಂತೂ ಭಯೋತ್ಪಾದಕರಿಗೆ ತರಬೇತಿಯ ಕೇಂದ್ರವಾಗಿತ್ತು. ಮುಂಬೈ ದಾಳಿಯ ರೂವಾರಿಗಳಾದ ಅಜ್ಮಲ್ ಕಸಬ್ ಹಾಗೂ ಡೇವಿಡ್ ಹೇಡ್ಲಿ ಸೇರಿ ಹಲವರು ಇದೇ ನೆಲೆಯಲ್ಲಿ ತರಬೇತಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಇವುಗಳನ್ನು ಗುರುತಿಸಿಯೇ ಭಾರತೀಯ ಸೇನೆಯು ರಾತ್ರೋರಾತ್ರಿ ದಾಳಿ ನಡೆಸಿದೆ.

ಮುರಿಡ್ಕೆಯಲ್ಲಿರುವ ಉಗ್ರರ ನೆಲೆಯು ಸುಮಾರು 82 ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿತ್ತು. ಇನ್ನು, ಬಹವಾಲ್ಪುರದಲ್ಲಿ ಮಸೀದಿ ಹಾಗೂ ನೆಲೆಯು ಸುಮಾರು 15 ಎಕರೆಯಲ್ಲಿ ನಿರ್ಮಿಸಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ. ಇವುಗಳ ಕುರಿತು ಸ್ಪಷ್ಟ ಮಾಹಿತಿ ಮೇರೆಗೆ ಭಾರತೀಯ ಸೇನೆಯು ಜೈಶೆ ಮೊಹಮ್ಮದ್, ಲಷ್ಕರೆ ತಯ್ಬಾ, ಹಿಜ್ಬುಲ್ ಮುಜಾಹಿದ್ದೀನ್ ನೆಲೆಗಳನ್ನು ಪುಡಿಗಟ್ಟಿದೆ.