17 ವರ್ಷಗಳೇ ಕಳೆದು ಹೋಗಿವೆ. ಭಾರತದ ಅತ್ಯಂತ ಕರಾಳ ಅಧ್ಯಾಯವೊಂದು ಕಡೆಗೂ ತಾರ್ಕಿಕ ನ್ಯಾಯದತ್ತ ಸಾಗಿದೆ. ಹೌದು…ಮುಂಬೈ ನರಮೇಧದ ಮಾಸ್ಟರ್ ಮೈಂಡ್ ತಹಾವುರ್ ರಾಣಾ ಕಡೆಗೂ ಭಾರತಕ್ಕೆ ಹಸ್ತಾಂತರವಾಗಿದ್ದಾನೆ. ಬಿಗಿ ಭದ್ರತೆಯಲ್ಲಿ ರಾಣಾನನ್ನ ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆತರಲಾಗಿದೆ.
ಪರಮ ಪಾಪಿಗೆ ಮೂರು ಹಂತದ ಭದ್ರತೆ
ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿರೋ ರಾಣಾ ಈಗ ಭಾರತದ ಬಂಧಿ. ಅಂದು ನರಮೇಧಕ್ಕೆ ಸ್ಕೆಚ್ ಹಾಕಿದ್ದು ಹೇಗೆ? ಯಾರೆಲ್ಲಾ ಇದರ ಹಿಂದಿದ್ದರು? ಕಸಬ್ ಸೇರಿದಂತೆ ಎಲ್ಲರಿಗೂ ಟ್ರೈನಿಂಗ್ ಕೊಟ್ಟಿದ್ದು ಯಾರು? ಆರ್ಥಿಕ ಬಲ ಎಲ್ಲಿಂದ ಬಂತು? ಹೀಗೆ ಸಾವಿರಾರು ಪ್ರಶ್ನೆಗಳಿಗೀಗ ರಾಣಾ ಉತ್ತರಿಸಬೇಕಿದೆ. ಎನ್ಐಎ ಕೇಂದ್ರ ಕಚೇರಿಯಲ್ಲಿರುವ ರಾಣಾಗೆ ರಾ ಸೇರಿದಂತೆ ಹತ್ತಾರು ಏಜನ್ಸಿಗಳ ಅಧಿಕಾರಿಗಳು ಪ್ರಶ್ನೆ ಮಾಡಲಿದ್ದಾರೆ. ಅಷ್ಟೇ ಅಲ್ಲಾ ಅಂದಿನ ಕರಾಳ ಚರಿತ್ರೆ ಹಿಂದೆ ಅಡಗಿರುವ ಮತ್ತಷ್ಟು ಕಾಣದ ಕೈಗಳನ್ನು ಹೆಕ್ಕಿ ತೆಗೆಯಬೇಕಿದೆ.
ಸದ್ಯ ದೆಹಲಿ ತಲುಪಿರುವ ರಾಣಾ ಎನ್ಐಎ ಕೇಂದ್ರ ಕಚೇರಿಯಲ್ಲಿದ್ದಾನೆ. ಮುಂದಿನ ಕೆಲ ದಿನಗಳ ಕಾಲ ರಾಣಾನ ವಿಚಾರಣೆ ಇಲ್ಲೇ ನಡೆಯಲಿದ್ದು, ಮುಂದೆ ತಿಹಾರ್ ಜೈಲಿನ ಆತಿಥ್ಯವೋ ಅಥವಾ ಮುಂಬೈಗೆ ಶಿಫ್ಟ್ ಮಾಡ್ತಾರೋ? ಎಂಬುವುದು ಮಾತ್ರ ತಿಳಿದು ಬಂದಿಲ್ಲ.
ಒಂದೊಮ್ಮೆ ಮುಂಬೈಗೆ ಸ್ಥಳಾಂತರಿಸಿದರೆ, ಇಲ್ಲಿನ ಆರ್ಥರ್ ರೋಡ್ ಜೈಲು ಸಿದ್ಧವಾಗಿದೆ. ಮುಂಬೈ ದಾಳಿ ಕೋರ ಅಜ್ಮಲ್ ಕಸಬ್ ನನ್ನು ಬಂಧಿಸಿಡಲಾಗಿದ್ದ ಬ್ಯಾರೆಕ್ ನಂಬರ್ 12ರಲ್ಲೇ ರಾಣಾನನ್ನು ಇರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಬುಲೆಟ್ ಫ್ರೂಫ್ ಸೆಲ್ ಆಗಿರುವ ನಂಬರ್ 12ರಲ್ಲೇ ಈ ಹಿಂದೆ ಕಸಬ್ ನನ್ನು ಇರಿಸಲಾಗಿತ್ತು. 1925ರಲ್ಲಿ ಕಟ್ಟಿದ ಈ ಜೈಲು 3 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದೇ ಜೈಲು ಮತ್ತೊಮ್ಮೆ ಮುಂಬೈ ದಾಳಿಕೋರನೊಬ್ಬನ ವಾಸ್ತವ್ಯಕ್ಕೆ ಸಾಕ್ಷಿಯಾಗುತ್ತಾ? ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.


















