ಬೆಂಗಳೂರು: ಅಬ್ಬಬ್ಬಾ…ಏನ್ ಬಿಸಿಲು ಗುರು..ಸ್ವಲ್ಪ ತಣ್ಣಗೇನಾದರು ಇದ್ದಿದ್ದರೆ ಹಿತವಾಗಿರುತ್ತಿತ್ತು ಅಂತಾ ಎಲ್ಲರೂ ಮಾತನಾಡಿಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯ. ಆದರೆ, ಈಗ ಈ ರೀತಿ ಹೇಳುವವರು ಹುಷಾರಾಗಿರಬೇಕಾಗಿದೆ.
ನೆತ್ತಿ ಸುಡುವ ಬಿಸಿಲು ಮನುಷ್ಯನನ್ನು ಹೈರಾಣಾಗಿಸುತ್ತಿದೆ. ಹಾಗಂತ ಈ ಸೂರ್ಯನೇಟಿನಿಂದ ಪಾರಾಗಬೇಕು ಅಂದರೆ ತಣ್ಣಗೆ ಏನಾದರು ಬೇಕು ಅಂತಾ ಐಸ್ ಕ್ರೀಂ, ತಂಪು ಪಾನೀಯ ಸೇವಿಸುವ ಮುನ್ನ ಎಚ್ಚರವಾಗಿರಬೇಕಿದೆ. ಕೂಲ್ ಆಗಿ ತಿಂದ ಐಸ್ ಕ್ರೀಂ ನಿಮ್ಮ ಉಸಿರಿಗೆ ಸಂಚಕಾರ ತಂದಿಡಬಹುದು.
ಸ್ವತಃ ಆಹಾರ ಇಲಾಖೆಯೇ ಬೆಚ್ಚಿಬೀಳುವಂತಹ ಸತ್ಯ ಅನಾವರಣವಾಗಿದೆ. ಮಕ್ಕಳಿಂದ ವೃದ್ಧರಾದಿ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವ ಐಸ್ ಕ್ರೀಂಗಳು ಉಸಿರನ್ನೇ ನಿಲ್ಲಿಸುವ ತಾಕತ್ತು ಹೊಂದಿದೆ ಅಂದರೆ ನೀವು ನಂಬಲೇ ಬೇಕು. ಇತ್ತೀಚೆಗಷ್ಟೇ ರಾಜ್ಯ ಆಹಾರ ಇಲಾಖೆ ನಡೆಸಿದ ಮಾದರಿ ಪ್ರಯೋಗದಲ್ಲಿ ಐಸ್ ಕ್ರೀಂ ತಿನ್ನಲು ಯೋಗ್ಯವಲ್ಲ ಎಂಬ ಅಂಶ ಬಯಲಾಗಿದೆ. ನೀವು ತಿನ್ನುವ ಐಸ್ ಕ್ರೀಂಗಳಲ್ಲಿ ಬಟ್ಟೆ ತೊಳೆಯುವುದಕ್ಕೆ ಬಳಸುವ ಮಾರ್ಜಕ ಅಂದರೆ, ವಾಷಿಂಗ್ ಪೌಡರ್ ಅಂಶಗಳು ಯತೇಚ್ಛವಾಗಿರುವುದು ಬೆಳಕಿಗೆ ಬಂದಿದೆ.
ತರಹೇವಾರಿ ಐಸ್ ಕ್ರೀಂಗಳಿವತ್ತು ಮಾರುಕಟ್ಟೆಯಲ್ಲಿ ಕೈಗೆಟುಕುವ ದರಗಳಲ್ಲಿ ಲಭ್ಯವಿದೆ. ಇಂತಹ ಅಗ್ಗದ ಐಸ್ ಕ್ರೀಂಗಳು ಆಕರ್ಷಕವಾಗಿದ್ದರೂ ಜೀವಕ್ಕೆ ಮಾರಕ ಅನ್ನುವುದು ನಿಜ. ಐಸ್ ಕ್ರೀಂಗಳಲ್ಲಿ ಮಾರ್ಜಕ ಒಂದೇ ಅಲ್ಲಾ ಸಕ್ಕರೆ ಬದಲು ಅಪಾಯಕಾರಿ ಟೇಸ್ಟಿಂಗ್ ಪೌಡರ್ ಬಳಕೆ ಮಾಡಲಾಗುತ್ತಿದೆ. ಸಾಲದ್ದಕ್ಕೆ ರಂಗು ರಂಗಿನ ಬಣ್ಣ ಬರಿಸುವುದಕ್ಕೆ ಅಪಾಯಕಾರಿ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿರುವುದು ಸಾಬೀತಾಗಿದೆ.
ಈಗಾಗಲೇ ರಾಜ್ಯದಲ್ಲಿ ಗೋಬಿ ಮಂಚೂರಿ, ಕಬಾಬ್ ಗೆ ಬಳಸಲಾಗುತ್ತಿದ್ದ ಬಣ್ಣಗಳನ್ನು ಬ್ಯಾನ್ ಮಾಡಲಾಗಿದೆ. ಕಾಟನ್ ಕ್ಯಾಂಡಿಗೂ ಇದೇ ಬ್ರಹ್ಮಾಸ್ತ್ರ ಪ್ರಯೋಗವಾಗಿದೆ. ಈ ಐಸ್ ಕ್ರೀಂಗಳ ಮೇಲೆ ಗದಾ ಪ್ರಹಾರ ಯಾವಾಗ ಎಂಬ ಪ್ರಶ್ನೆ ಮೂಡುತ್ತಿದೆ. ಅಷ್ಟೇ ಅಲ್ಲಾ ಅದೆಷ್ಟೋ ತಂಪು ಪಾನೀಯಗಳಲ್ಲಿ ಕೊಳಚೆ ನೀರು ಬಳಕೆಯಾಗಿರುವುದು ಕೂಡ ಈಗ ಸಾಬೀತಾಗಿದೆ. ಈ ನಡುವೆ ಬೆಂಗಳೂರು ಒಂದರಲ್ಲೇ 90ಕ್ಕೂ ಹೆಚ್ಚು ಐಸ್ ಕ್ರೀಂ ಅಂಗಡಿಗಳಿಗೆ ಆಹಾರ ಇಲಾಖೆ ನೋಟಿಸ್ ಜಾರಿ ಮಾಡಲಾಗಿದೆ.
ಹೀಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆಸೆ ಪಟ್ಟು ತಿನ್ನೋ ಐಸ್ ಕ್ರೀಂ ಪ್ರಾಣಕ್ಕೆ ಸಂಚಕಾರ ತರುವ ಮುನ್ನ ಕಠಿಣ ಕ್ರಮ ಅನಿವಾರ್ಯವಾಗಿದ್ದು, ಆಹಾರ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.